ಶಿವಮೊಗ್ಗ: ನಿಯಮಬಾಹಿರವಾಗಿ ಪೋಷಕರಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಮತ್ತು ಅನುದಾನರಹಿತ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯು (Private School) ಬೀಗ ಜಡಿಯುವ ಎಚ್ಚರಿಕೆ ನೀಡಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಸಾರಿಗೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ತಾಲೂಕಿನ ಎಲ್ಲಾ ಅನ್‌ಎಡೆಡ್ ಶಾಲೆಗಳ ಮುಖ್ಯಸ್ಥರ ಮಹತ್ವದ ಸಭೆಯಲ್ಲಿ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮನಬಂದಂತೆ ವರ್ತಿಸುವ ನೀತಿಗೆ ಕಡಕ್ ಬ್ರೇಕ್ ಹಾಕಿದ್ದಾರೆ.
ಜನರಿಂದ ದೂರುಗಳ ಮಹಾಪೂರ
ಖಾಸಗಿ ಶಾಲೆಗಳು ವಿಧಿಸುತ್ತಿರುವ ದುಬಾರಿ ಫೀಸ್, ಯುನಿಫಾರ್ಮ್ ಹಾಗೂ ವ್ಯಾನ್ ಚಾರ್ಜ್‌ಗಳಿಂದಾಗಿ ಮಧ್ಯಮ ವರ್ಗದ ಜನಸಾಮಾನ್ಯರು ಕಂಗಾಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದುಬರುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (DDPI) ಮಂಜುನಾಥಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಂದು ಶಾಲೆಯೂ ತಮ್ಮ ಪ್ರವೇಶಾತಿ ದರದ ಸಂಪೂರ್ಣ ವಿವರವನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಹಾಕಬೇಕು. ಒಂದು ವೇಳೆ ಶುಲ್ಕದ ಹಠಕ್ಕೆ ಬಿದ್ದು ಮಕ್ಕಳ ಟಿ.ಸಿ ತಡೆಯುವುದು, ರಿಸಲ್ಟ್ ಶೀಟ್ ನೀಡದೆ ಸತಾಯಿಸುವುದು ಅಥವಾ ಮಕ್ಕಳನ್ನು ತರಗತಿಯಿಂದ ಹೊರಗಿಡುವುದು ಕಂಡುಬಂದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೂಲಕ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಅವರು ಗುಡುಗಿದ್ದಾರೆ. ಇದೇ ವೇಳೆ ಬಡ ಮಕ್ಕಳಿಗೆ ಉಚಿತ ಸೀಟು ನೀಡಿ ಆಸರೆಯಾಗಿರುವ ಕೆಲವು ಖಾಸಗಿ ಶಾಲೆಗಳ ಮಾನವೀಯ ನಡೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ (BEO) ರಮೇಶ್ ನಾಯ್ಕ್ ಶ್ಲಾಘಿಸಿದರು.
ಇದೇ ಸಭೆಯಲ್ಲಿ ಶಾಲಾ ವಾಹನಗಳ ದುಸ್ಥಿತಿಯ ಬಗ್ಗೆ ಕಳವಳಕಾರಿ ಮಾಹಿತಿ ಹಂಚಿಕೊಂಡ ಪ್ರಾದೇಶಿಕ ಸಾರಿಗೆ ಅಧಿಕಾರಿ (RTO) ಮರುಗೇಂದ್ರಯ್ಯ ಶಿರೋಳ್ಕರ್, ಜಿಲ್ಲೆಯ ಖಾಸಗಿ ಶಾಲೆಗಳ ಒಟ್ಟು 710 ಕ್ಕೂ ಅಧಿಕ ಬಸ್‌ಗಳ ಪೈಕಿ 80 ಕ್ಕೂ ಹೆಚ್ಚು ವಾಹನಗಳು ಕನಿಷ್ಠ ಕ್ಷಮತಾ ಪ್ರಮಾಣಪತ್ರವನ್ನು (FC) ಪಡೆದಿಲ್ಲ ಮತ್ತು ಪರ್ಮಿಟ್ ನವೀಕರಿಸಿಲ್ಲ ಎಂದು ಬಹಿರಂಗಪಡಿಸಿದರು. ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವ ಇಂತಹ ಸಂಸ್ಥೆಗಳು ತಕ್ಷಣವೇ ವಾಹನಗಳನ್ನು ಸುಸ್ಥಿತಿಗೆ ತರಬೇಕು. ಬಸ್‌ಗಳಲ್ಲಿ ಸಿಸಿಟಿವಿ, ಜಿಪಿಎಸ್ ಅಳವಡಿಸುವುದು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಮಹಿಳಾ ಅಟೆಂಡರ್‌ಗಳನ್ನು ನೇಮಿಸುವುದು ಕಡ್ಡಾಯ ಎಂದು ಸೂಚಿಸಿದರು.
ಇನ್ನು ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ವಿ. ದೇವರಾಜ್ ಮಾತನಾಡಿ, ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಡ್ರೈವರ್‌ಗಳು ಅತ್ಯಂತ ಜಾಗರೂಕರಾಗಿರಬೇಕು. ಇತ್ತೀಚಿನ ತಪಾಸಣೆಯಲ್ಲಿ ಕುಡಿದು ಶಾಲಾ ವಾಹನ ಚಲಾಯಿಸುತ್ತಿದ್ದ ನಾಲ್ಕು ಮಂದಿ ಚಾಲಕರನ್ನು ವಶಕ್ಕೆ ಪಡೆದು, ಅವರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು. ಎಲ್ಲಾ ಶಾಲಾ ವಾಹನಗಳು ಹಳದಿ ಬಣ್ಣ, ಸ್ಪೀಡ್ ಗವರ್ನರ್ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹೊಂದುವಂತೆ ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್ ನೀಡಲಾಯಿತು. ಈ ಉನ್ನತ ಮಟ್ಟದ ಸಭೆಯಲ್ಲಿ ಇಲಾಖೆಯ ಪ್ರಮುಖ ಅಧಿಕಾರಿಗಳಾದ ಗಿರೀಶ್, ಶಿವಪ್ಪ ಸಂಗಣ್ಣನವರ್, ಮಲ್ಲೇಶಪ್ಪ ಸೇರಿದಂತೆ ತಾಲೂಕಿನ ನೂರಾರು ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು.
