TOP NEWS

Siddaramaiah: ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

siddaramaiah slams bjp and election commission rajya sabha election

ಬೆಂಗಳೂರು: “ದೇಶದ ಪ್ರಜಾಪ್ರಭುತ್ವದ ಆಶಯಗಳನ್ನು ಹೊಸಕಿ ಹಾಕಿ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ನರೇಂದ್ರ ಮೋದಿ ಅವರ ಆಡಳಿತವನ್ನು ಬಿಜೆಪಿ ಸಂಭ್ರಮಿಸುತ್ತಿರುವುದು ದೇಶದ ವ್ಯವಸ್ಥೆಗೆ ಮಾಡಿದ ದೊಡ್ಡ ಅವಮಾನ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ (CWC) ಸದಸ್ಯ ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಖಂಡಿಸಿ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ರಾಜಕೀಯ ಪಿತೂರಿ ಎಂದ ಸಿದ್ದರಾಮಯ್ಯ

ಮಧ್ಯಪ್ರದೇಶದ ಚುನಾವಣಾ ಕಣದಲ್ಲಿದ್ದ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಲೋಪಗಳಿರಲಿಲ್ಲ. ಆದರೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದಿರುವ ಚುನಾವಣಾ ಆಯೋಗವು ಇಲ್ಲದ ತಪ್ಪುಗಳನ್ನು ಹುಡುಕಿ ನಾಮಪತ್ರ ವಜಾಗೊಳಿಸಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಮತ್ತು ವ್ಯವಸ್ಥಿತ ರಾಜಕೀಯ ಪಿತೂರಿ ಎಂದು ಸಿದ್ದರಾಮಯ್ಯ ನೇರವಾಗಿ ಆರೋಪಿಸಿದ್ದಾರೆ. ನಿಯಮಗಳ ಪ್ರಕಾರ ಮೀನಾಕ್ಷಿ ನಟರಾಜನ್‌ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಕೇವಲ ಖಾಸಗಿ ದೂರಿಗೆ ಸಂಬಂಧಿಸಿದ ಶೋಕಾಸ್ ನೋಟಿಸ್ ಅನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸುವ ಅಗತ್ಯವಿರಲಿಲ್ಲ. ಆದರೂ ಆಯೋಗವು ಏಕಪಕ್ಷೀಯವಾಗಿ ಈ ಕ್ರಮ ಕೈಗೊಂಡಿದೆ ಎಂದು ಅವರು ದೂರಿದ್ದಾರೆ.

ಮಧ್ಯಪ್ರದೇಶದಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಷ್ಟು ಮಾತ್ರ ಸಂಖ್ಯಾಬಲ ಹೊಂದಿದ್ದ ಬಿಜೆಪಿ, ಬೇಕೆಂದೇ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಕೋಟ್ಯಂತರ ರೂಪಾಯಿಗಳ ಆಮಿಷ ಒಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು (ಕುದುರೆ ವ್ಯಾಪಾರ) ದೊಡ್ಡ ಜಾಲವನ್ನೇ ಹೆಣೆಯಲಾಗಿತ್ತು. ಆದರೆ ಕಾಂಗ್ರೆಸ್ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಬಿಜೆಪಿಯ ಆಟ ಸಾಗಲಿಲ್ಲ. ಯಾವಾಗ ಶಾಸಕರ ಖರೀದಿ ಪ್ರಕ್ರಿಯೆ ವಿಫಲವಾಯಿತೋ, ಆಗ ಅಂತಿಮ ಹಂತದಲ್ಲಿ ಚುನಾವಣಾ ಆಯೋಗವನ್ನು ದಾಳವಾಗಿ ಬಳಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನೇ ರದ್ದುಗೊಳಿಸುವ ತಂತ್ರ ಹೂಡಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ಬಿಜೆಪಿಯ ಚುನಾವಣಾ ನೀತಿಗಳನ್ನು ಕಟುವಾಗಿ ಟೀಕಿಸಿರುವ ಅವರು, “ದೇಶದಲ್ಲಿ ಈಗಾಗಲೇ ‘ಮತಗಳ್ಳತನ’ವನ್ನು ರೂಢಿಸಿಕೊಂಡಿರುವ ಬಿಜೆಪಿ, ಈಗ ರಾಜ್ಯಸಭೆಯಲ್ಲೂ ‘ಸ್ಥಾನಗಳ್ಳತನ’ಕ್ಕೆ ಇಳಿದಿದೆ. ವಿರೋಧ ಪಕ್ಷಗಳನ್ನು ಸೀಳುವುದು, ಶಾಸಕರನ್ನು ಖರೀದಿಸುವುದು ಹಾಗೂ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದೇ ಬಿಜೆಪಿಯ ಮೂಲ ಸಿದ್ಧಾಂತವಾಗಿದೆ” ಎಂದು ಕಿಡಿಕಾರಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಕೃತಕವಾಗಿ ತಮ್ಮ ಸಂಖ್ಯಾಬಲವನ್ನು ವೃದ್ಧಿಸಿಕೊಂಡು, ಸಂವಿಧಾನ ವಿರೋಧಿ ಕಾಯ್ದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಜಾರಿಗೊಳಿಸುವುದು ಇವರ ಅಸಲಿ ಆಶಯವಾಗಿದೆ. ಸಂವಿಧಾನದ ಮೇಲಿನ ಇಂತಹ ದಾಳಿಗಳ ವಿರುದ್ಧ ಕಾಂಗ್ರೆಸ್ ಸಾರ್ವಜನಿಕರ ಪರವಾಗಿ ಕಾನೂನಾತ್ಮಕ ಹೋರಾಟ ಮುಂದುವರಿಸಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬಾಲ್ಯದ ಸ್ನೇಹ ತಂದಿಟ್ಟ ಬಿಟ್‌ಕಾಯಿನ್ ಗಂಡಾಂತರ: ನಲಪಾಡ್ ವಿರುದ್ಧ ಎಸ್‌ಐಟಿ ದೋಷಾರೋಪ ಪಟ್ಟಿ

Leave a Reply

Your email address will not be published. Required fields are marked *