ಸಾಗರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆಂದು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬಂದಿದ್ದ ಆಂಧ್ರಪ್ರದೇಶ ಮೂಲದ (Crime)ಯುವಕನೊಬ್ಬ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಭವಿಸಿದೆ. ಆಂಧ್ರಪ್ರದೇಶದ ರಾಯದುರ್ಗ ನಿವಾಸಿಯಾದ ಉಮೇಶ್ (೩೦) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಸೆಳೆತಕ್ಕೆ ಸಿಲುಕಿ ನಾಪತ್ತೆ ಆಗಿದ್ದ ಯುವಕ
ಬುಧವಾರ ಮಧ್ಯಾಹ್ನ ಸಿಗಂದೂರು ಸೇತುವೆಯ ಕೆಳಭಾಗದ ಮುಳುಗಡೆ ಪ್ರದೇಶದಲ್ಲಿ ಈಜಲೆಂದು ನೀರಿನಲ್ಲಿ ಇಳಿದಿದ್ದ ಉಮೇಶ್, ದಿಢೀರನೆ ನೀರಿನ ಸೆಳತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಯುವಕ ನೀರಿನಲ್ಲಿ ಮುಳುಗುತ್ತಿದ್ದಂತೆ ಆತಂಕಗೊಂಡ ಒಟ್ಟಿಗೆ ಬಂದಿದ್ದ ಸ್ನೇಹಿತರು ಹಾಗೂ ಕುಟುಂಬದವರು ತಕ್ಷಣವೇ ಸ್ಥಳೀಯರ ನೆರವು ಕೋರಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸಾಗರದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರ ಸಹಕಾರದೊಂದಿಗೆ ತೀವ್ರ ಹುಡುಕಾಟ ನಡೆಸಿದರು. ಕೆಲವೇ ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ನಾಪತ್ತೆಯಾಗಿದ್ದ ಉಮೇಶ್ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ದೇವಸ್ಥಾನದ ದರ್ಶನ ಮುಗಿಸಿ ಸಂತೋಷದಿಂದ ಕಾಲ ಕಳೆಯಲು ಹೋದ ಜಾಗದಲ್ಲಿ ಯುವಕ ಸಾವನ್ನಪ್ಪಿರುವುದು ಆತನ ಕುಟುಂಬಸ್ಥರು ಮತ್ತು ಸ್ನೇಹಿತರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಇದನ್ನೂ ಓದಿ: ವರದಕ್ಷಿಣೆ ದುರಾಸೆಗೆ ಮದುವೆ ಮಂಟಪದಲ್ಲೇ ಬೀಗರ ಜಗಳ, ಕಲ್ಯಾಣ ಮಂಟಪವೇ ರಣರಂಗ
ವರದಿ: ಪ್ರಶಾಂತ್ ಭಟ್
