TOP NEWS

Encounter: ರಾಜೌರಿ ಅರಣ್ಯದಲ್ಲಿ ಉಗ್ರರ ವಿರುದ್ಧ ಭೀಕರ ಜಂಟಿ ಕಾರ್ಯಾಚರಣೆ: ಸೇನೆಯ ಸರಣಿ ಭೇಟೆಗೆ ನಲುಗಿದ ಭಯೋತ್ಪಾದಕ ಜಾಲ

encounter terrorists and security forces in jammu Kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ದೊರಿಮಾಲ್ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭೀಕರ (Encounter) ಗುಂಡಿನ ಚಕಮಕಿ ಆರಂಭವಾಗಿದೆ. ದಟ್ಟವಾದ ಕಾಡಿನೊಳಗೆ ಕನಿಷ್ಠ ಇಬ್ಬರಿಂದ ಮೂವರು ಪಾಕಿಸ್ತಾನಿ ಉಗ್ರರು ಅಡಗಿಕುಳಿತಿದ್ದು, ಸದ್ಯ ಅವರನ್ನು ಸೇನಾ ಪಡೆಗಳು ಯಶಸ್ವಿಯಾಗಿ ಸುತ್ತುವರೆದಿವೆ ಎಂದು ವರದಿಯಾಗಿದೆ. ಅರಣ್ಯ ಭಾಗದಲ್ಲಿ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ತಕ್ಷಣವೇ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಈ ವೇಳೆ ಅಡಗಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ಭಾಗದಲ್ಲಿ ಸದ್ಯಕ್ಕೆ ಕಾರ್ಯಾಚರಣೆ ಮುಂದುವರಿದಿದೆ.

ಇದಕ್ಕೂ ಮುನ್ನ ಇದೇ ವರ್ಷದ ಫೆಬ್ರವರಿಯಲ್ಲಿ ಭಾರತೀಯ ಸೇನೆಯ ‘ವೈಟ್ ನೈಟ್ ಕಾರ್ಪ್ಸ್’ ವಿಭಾಗವು ಕಿಶ್ತ್ವಾರದ ಇಡೀ ಉಗ್ರರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವುದಾಗಿ ಪ್ರಕಟಿಸಿತ್ತು. ಬರೋಬ್ಬರಿ ೩೨೬ ದಿನಗಳ ಸುದೀರ್ಘ ಕಾರ್ಯಾಚರಣೆಯ ನಂತರ ಕಿಶ್ತ್ವಾರವನ್ನು ಉಗ್ರ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದ ಸೇನೆಯು, ಹತರಾದ ಏಳು ಭಯೋತ್ಪಾದಕರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಿಶ್ತ್ವಾರದ ಪ್ರಮುಖ ಉಗ್ರ ಕೃತ್ಯಗಳ ಮಾಸ್ಟರ್ ಮೈಂಡ್ ಆಗಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಸೈಫುಲ್ಲಾನನ್ನು ಸದೆಬಡಿಯಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಜೊತೆಗೆ ಜಮ್ಮು-ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ವಿವಿಧ ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ಭಾಗಿಯಾಗಿದ್ದವು.

2026ರ ಸಾಲಿನಲ್ಲಿ ನಡೆದ ಪ್ರಮುಖ ಸೇನಾ ಕಾರ್ಯಾಚರಣೆಗಳು: ಭಾರತೀಯ ಸೇನೆಯು ಉಗ್ರರ ವಿರುದ್ಧ ಈ ವರ್ಷ ಎರಡು ಪ್ರಮುಖ ಆಪರೇಷನ್‌ಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ಚಾತ್ರು ಪ್ರದೇಶದ ಮಂದ್ರಾಲ್-ಸಿಂಗ್‌ಪೋರಾ ಸಮೀಪದ ಸೋನಾರ್ ಗ್ರಾಮದ ಅರಣ್ಯದಲ್ಲಿ ಜನವರಿ ೧೮ ರಂದು ‘ಆಪರೇಷನ್ ಟ್ರಾಶಿ-೧’ ಅನ್ನು ಪ್ರಾರಂಭಿಸಲಾಯಿತು. ಆರಂಭಿಕ ಗುಂಡಿನ ಚಕಮಕಿಯಲ್ಲಿ ಎಂಟು ಸೈನಿಕರು ಗಾಯಗೊಂಡಿದ್ದರು ಮತ್ತು ಚಿಕಿತ್ಸೆ ಫಲಕಾರಿಯಾಗದೆ ಹವಿಲ್ದಾರ್ ಗಜೇಂದ್ರ ಸಿಂಗ್ ಅವರು ವೀರಮರಣ ಹೊಂದಿದ್ದರು. ಇದರ ಬೆನ್ನಲ್ಲೇ ಜನವರಿ ೨೨, ೨೪ ಮತ್ತು ೩೧ ರಂದು ಡೋಲ್ಗಾಮ್ ಪ್ರದೇಶದಲ್ಲಿ ಸರಣಿ ಚಕಮಕಿಗಳು ನಡೆದವು. ಅಂತಿಮವಾಗಿ ಚಾತ್ರುದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸುವ ಮೂಲಕ ಈ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು.

ಇದಾದ ನಂತರ ಫೆಬ್ರವರಿ ೪ ರಂದು ಬಸಂತ್‌ಗಢದ ಜೋಫರ್ ಅರಣ್ಯ ಪ್ರದೇಶದಲ್ಲಿ ವೈಟ್ ನೈಟ್ ಕಾರ್ಪ್ಸ್, ಸಿಐಎಫ್ ಡೆಲ್ಟಾ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಪಡೆಗಳು ಜಂಟಿಯಾಗಿ ‘ಆಪರೇಷನ್ ಕಿಯಾ’ ಕೈಗೊಂಡಿದ್ದವು. ಈ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಉಗ್ರರ ವಿರುದ್ಧ ಅತ್ಯಾಧುನಿಕ ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ಸ್) ಶಸ್ತ್ರಾಸ್ತ್ರಗಳನ್ನು ಬಳಸಿದ್ದವು. ಇದರಿಂದಾಗಿ ಉಗ್ರರು ಅಡಗಿದ್ದ ಗುಹೆಯ ಒಂದು ಭಾಗವು ಭೀಕರ ಸ್ಫೋಟಕ್ಕೆ ನುಜ್ಜುಗುಜ್ಜಾಗಿತ್ತು. ಈ ಭೀಕರ ಸ್ಫೋಟದ ತೀವ್ರತೆಗೆ ಗುಹೆಯ ಒಳಗಿದ್ದ ಇಬ್ಬರೂ ಉಗ್ರರು ಸ್ಥಳದಲ್ಲೇ ಹತರಾಗಿದ್ದರು. ಸದ್ಯ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಬೇರುಗಳನ್ನು ಸದೆಬಡಿಯಲು ಸೇನೆಯು ಇಂತಹ ಕಠಿಣ ಕ್ರಮಗಳನ್ನು ಮುಂದುವರಿಸಿದೆ.

ಇದನ್ನೂ ಓದಿ: ಸ್ಟೀಫನ್ ಕೋಲ್ಬರ್ಟ್ ವಿದಾಯಕ್ಕೆ ಟ್ರಂಪ್ ವ್ಯಂಗ್ಯ

Leave a Reply

Your email address will not be published. Required fields are marked *