ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಎಸ್ಎಲ್ಸಿ (SSLC) ಪರೀಕ್ಷೆ-2ರ ವಿಷಯವಾರು ಕರಡು ಕೀ ಉತ್ತರಗಳನ್ನು (Key Answers) ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ. ಈ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಅಥವಾ ಶಿಕ್ಷಕರು ಯಾರಾದರೂ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದರೆ, ಅದಕ್ಕೆ ನಾಳೆ ಕಡೆಯ ದಿನವಾಗಿದೆ ಎಂದು ಮಂಡಳಿ ತಿಳಿಸಿದೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ
ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ನಾಳೆ ಸಂಜೆ 5.30 ರ ಒಳಗಾಗಿ ಮಂಡಳಿಯ ಅಧಿಕೃತ ವೆಬ್ಸೈಟ್ ಮೂಲಕವೇ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಬೇಕಾಗುತ್ತದೆ. ನಿಗದಿತ ಸಮಯ ಹಾಗೂ ದಿನಾಂಕ ಮುಗಿದ ಬಳಿಕ ಬರುವ ಯಾವುದೇ ರೀತಿಯ ಮನವಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ಮಂಡಳಿ ತನ್ನ ಅಧಿಕೃತ ಸುತ್ತೋಲೆಯಲ್ಲಿ ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದೆ.
ಎಸ್ಎಸ್ಎಲ್ಸಿ ಪ್ರಥಮ ಭಾಷೆ ಕನ್ನಡದಲ್ಲಿ 19 ಸಾವಿರ ವಿದ್ಯಾರ್ಥಿಗಳು ಫೇಲ್: ಕಡ್ಡಾಯ ಉದ್ಯೋಗ ಮೀಸಲಾತಿಗೆ ಸಮಿತಿ ಶಿಫಾರಸು
ರಾಜ್ಯದ ಶಾಲಾ ಶಿಕ್ಷಣ ಇತಿಹಾಸದಲ್ಲೇ ಹಿಂದೆಂದೂ ಕಾಣದ ಆತಂಕಕಾರಿ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ದುಕೊಂಡಿದ್ದ ಸುಮಾರು 19,000 ವಿದ್ಯಾರ್ಥಿಗಳು ತೇರ್ಗಡೆಯಾಗಲು ವಿಫಲರಾಗಿದ್ದಾರೆ. ತಾಯ್ನುಡಿಯಲ್ಲೇ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮಕ್ಕಳು ಅನುತ್ತೀರ್ಣರಾಗಿರುವುದು ಶಿಕ್ಷಣ ವಲಯದಲ್ಲಿ ತೀವ್ರ ಕಳವಳ ಮೂಡಿಸಿದ್ದು, ಈ ಕುರಿತು ವಿಸ್ತೃತ ತನಿಖೆ ನಡೆಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿಯು ಸರ್ಕಾರಕ್ಕೆ ಪ್ರಮುಖ ವರದಿಯೊಂದನ್ನು ಹಸ್ತಾಂತರಿಸಿದೆ.
ಪ್ರಸಿದ್ಧ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ ಅವರ ನೇತೃತ್ವದ ಸಮಿತಿಯು ಈ ಸಾಮೂಹಿಕ ವೈಫಲ್ಯದ ಹಿಂದಿರುವ ನೈಜ ಕಾರಣಗಳನ್ನು ಪತ್ತೆಹಚ್ಚಿದೆ. ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸದೇ ಇರುವುದು, ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮಗಳ ನಡುವೆ ಸಮನ್ವಯತೆ ಇಲ್ಲದಿರುವುದು ಹಾಗೂ ಸೃಜನಶೀಲತೆಗೆ ಪೂರಕವಾಗಿಲ್ಲದ ಕಠಿಣ ಪಠ್ಯಪುಸ್ತಕಗಳು ಮಕ್ಕಳ ಹಿನ್ನಡೆಗೆ ಮೂಲ ಕಾರಣ ಎಂದು ವರದಿ ಬೆರಳು ಮಾಡಿದೆ. ಇದರ ಜೊತೆಗೆ, ಬಹುತೇಕ ಶಾಲೆಗಳಲ್ಲಿ ನುರಿತ ಕನ್ನಡ ಶಿಕ್ಷಕರ ಕೊರತೆ ಇರುವುದು ಮತ್ತು ಭಾಷಾ ವಿಷಯಗಳಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ಸಿಗದೇ ಇರುವುದು ಈ ದುಸ್ಥಿತಿಗೆ ಕಾರಣ ಎಂದು ಸಮಿತಿ ವಿಶ್ಲೇಷಿಸಿದೆ.
ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿಯು ಸರ್ಕಾರಕ್ಕೆ ಕೆಲವು ಕ್ರಾಂತಿಕಾರಿ ಸಲಹೆಗಳನ್ನು ನೀಡಿದೆ. ಕನಿಷ್ಠ 10ನೇ ತರಗತಿಯವರೆಗೆ ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಎಲ್ಲಾ ಸರ್ಕಾರಿ ಉದ್ಯೋಗ ನೇಮಕಾತಿಗಳಲ್ಲಿ ಶೇ. 25ರಷ್ಟು ನೇರ ಮೀಸಲಾತಿ ಕಲ್ಪಿಸಬೇಕು ಎಂಬುದು ಇವುಗಳಲ್ಲಿ ಪ್ರಮುಖವಾಗಿದೆ. ಈ ಕ್ರಮದಿಂದ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲಿಗೆ ಸೇರಿಸಲು ಮುಂದೆ ಬರಲಿದ್ದಾರೆ ಎಂಬುದು ಸಮಿತಿಯ ಆಶಯವಾಗಿದೆ. ಇದರೊಂದಿಗೆ, ಪ್ರಸ್ತುತ ಜಾರಿಯಲ್ಲಿರುವ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು, ಕೇವಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನೊಳಗೊಂಡ ದ್ವಿಭಾಷಾ ನೀತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ವರದಿಯಲ್ಲಿ ಒತ್ತಾಯಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಈ ಸಮಗ್ರ ಶಿಫಾರಸುಗಳ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಸಿದ್ದಾರೆ. ಕೇವಲ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದಷ್ಟೇ ಅಲ್ಲದೆ, ಕನ್ನಡದಲ್ಲಿ ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ನೀಡುವುದು ಹಾಗೂ ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿ ಆದ್ಯತೆ ನೀಡುವ ಮೂಲಕ ಭಾಷಾ ಕಲಿಕೆಗೆ ಹೊಸ ಚೈತನ್ಯ ತುಂಬಬೇಕು ಎಂದು ವರದಿಯಲ್ಲಿ ಕೋರಲಾಗಿದೆ. ಸರ್ಕಾರದ ಮುಂದಿನ ನಿರ್ಧಾರಗಳ ಮೇಲೆ ಈಗ ಕನ್ನಡ ಭಾಷಾ ಕಲಿಕೆಯ ಭವಿಷ್ಯ ನಿರ್ಧಾರವಾಗಬೇಕಿದೆ.
ಇದನ್ನೂ ಓದಿ: ಬೇಸೂರಿನಲ್ಲಿ ಅಣುಸ್ಥಾವರ ವಿರೋಧಿಸಿ ಪಾದಯಾತ್ರೆ, NOC ಕೊಡದಂತೆ ಸರ್ಕಾರಕ್ಕೆ ಆಗ್ರಹ
