DK Shivakumar: ಹೈಕಮಾಂಡ್ ತೀರ್ಮಾನವೇ ನಮಗೆ ಪ್ರಸಾದ: ನಾಯಕತ್ವ ಬದಲಾವಣೆ ಚರ್ಚೆಗೆ ಡಿಕೆಶಿ ಮಾರ್ಮಿಕ ಪ್ರತಿಕ್ರಿಯೆ

dk shivakumar political statement increased curiosity

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಸಂಚಲನ ಮತ್ತೆ ಶುರುವಾಗಿದ್ದು, ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಏನೇ ಆದೇಶ ನೀಡಿದರೂ ನಮಗದು ಪ್ರಸಾದ ಇದ್ದಂತೆ,” ಎಂದು ಹೇಳುವ ಮೂಲಕ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನಾಯಕತ್ವದ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದರು. ಈಗ ಡಿಕೆಶಿ ಕೂಡ ಅದೇ ಧಾಟಿಯಲ್ಲಿ ಮಾತನಾಡಿರುವುದು ಕುತೂಹಲ ಮೂಡಿಸಿದೆ. “ದಿಲ್ಲಿ ನಾಯಕರು ಏನು ಹೇಳುತ್ತಾರೋ ಅದನ್ನು ನಾವು ಪಾಲಿಸಲೇಬೇಕು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ವಿರುದ್ಧ ಆಕ್ರೋಶ: ಇದೇ ಸಂದರ್ಭದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, “ಬಿಜೆಪಿಗೆ ಬಡವರ ಅಥವಾ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಚುನಾವಣೆ ಮುಗಿಯಲಿ ಎಂದು ಕಾಯುತ್ತಿದ್ದ ಸರ್ಕಾರ, ಈಗ ಬೆಲೆ ಏರಿಸುವ ಮೂಲಕ ಜನರ ಮೇಲೆ ಗದಾಪ್ರಹಾರ ಮಾಡಿದೆ. ಹೋಟೆಲ್ ಉದ್ಯಮ ಈಗಾಗಲೇ ಸಂಕಷ್ಟದಲ್ಲಿದೆ, ಈ ಬೆಲೆ ಏರಿಕೆಯ ಹೊರೆ ಅಂತಿಮವಾಗಿ ಜನಸಾಮಾನ್ಯರ ಜೇಬಿಗೇ ಕತ್ತರಿ ಹಾಕಲಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೇಂದ್ರದ ವಿದೇಶಾಂಗ ನೀತಿಯ ವೈಫಲ್ಯದಿಂದ ಅಕ್ಕಪಕ್ಕದ ರಾಷ್ಟ್ರಗಳೊಂದಿಗೆ ಸಂಬಂಧ ಹದಗೆಡುತ್ತಿದೆ ಎಂದೂ ಅವರು ದೂರಿದರು.

ಅಭಿವೃದ್ಧಿ ಕೆಲಸಗಳ ಬಗ್ಗೆ ಅಸಮಾಧಾನ: ಸಚಿವ ಸಂಪುಟದ ನಿರ್ಧಾರಗಳ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳು ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ 600 ಕೋಟಿ ರೂ. ಅನುದಾನವನ್ನು ಮಾತ್ರ ಹೈಲೈಟ್ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. “ಸರ್ಕಾರ ಬಿಡದಿ ಬಳಿ 18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇಂತಹ ಬೃಹತ್ ಯೋಜನೆಗಳ ಬಗ್ಗೆ ಚರ್ಚಿಸದೆ, ಕೇವಲ ಒಂದು ಸಮುದಾಯದ ಅನುದಾನದ ಬಗ್ಗೆ ಯಾಕೆ ಅಷ್ಟೊಂದು ಚರ್ಚೆ ಮಾಡ್ತೀರಿ?” ಎಂದು ಪ್ರಶ್ನಿಸಿದರು. ಒಟ್ಟಾರೆಯಾಗಿ, ಹೈಕಮಾಂಡ್ ನಿಲುವಿಗೆ ತಲೆಬಾಗುವ ಮೂಲಕವೇ ರಾಜ್ಯ ರಾಜಕಾರಣದ ಮುಂದಿನ ನಡೆಯ ಬಗ್ಗೆ ಡಿಕೆಶಿ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದ 23 ಸರ್ಕಾರಿ ಪ್ರೌಢಶಾಲೆಗಳು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ

Leave a Reply

Your email address will not be published. Required fields are marked *