TOP NEWS

Cooker Bomb Case: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ; ಶಿಕ್ಷೆ ಸಾಕಾಗದು ಎಂದ ಸಂತ್ರಸ್ತ ಆಟೋ ಚಾಲಕ

cooker bomb blast case 10 years jail for accused but victim is unhappy

ಮಂಗಳೂರು: 2022ರ ನವೆಂಬರ್ 19ರಂದು ನಡೆದಿದ್ದ ಬಹುಚರ್ಚಿತ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Cooker Bomb Case) ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ, ಈ ಶಿಕ್ಷೆಯ ಪ್ರಮಾಣ ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೀವಾವಾಧಿ ಶಿಕ್ಷೆ ಆಗಬೇಕಿತ್ತು

ಅಪರಾಧಿಗೆ ಶಿಕ್ಷೆಯಾಗಿರುವುದು ಒಳ್ಳೆಯದೇ ಆದರೂ, ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಲು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು ಎಂದು ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ. ಅಂದು ಆಟೋದಲ್ಲಿ ಪ್ರಯಾಣಿಕನಾಗಿ ಬಂದಿದ್ದ ಶಾರಿಕ್‌ನಿಂದಾಗಿ ನನ್ನ ಬದುಕು ಸಂಪೂರ್ಣವಾಗಿ ಬದಲಾಯಿತು. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಹಲವರು ಸಹಾಯ ಮಾಡಿದ್ದರೂ, ನಾನು ಇಂದಿಗೂ ಔಷಧಕ್ಕಾಗಿ ಹಣ ವೆಚ್ಚ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದೇನೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ದುರಂತದಿಂದ ಪಾರಾಗಿದ್ದು ದೈವದ ಕೃಪೆಯಿಂದಲೇ ಎಂದು ಅವರು ಸ್ಮರಿಸಿದ್ದಾರೆ.

ತೀರ್ಪನ್ನು ಸ್ವಾಗತಿಸಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಅಪರಾಧಿಗೆ ಶಿಕ್ಷೆಯಾಗಿರುವುದು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆ ಎಂದಿದ್ದಾರೆ. ಕದ್ರಿ ಮಂಜುನಾಥ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಭಯೋತ್ಪಾದನೆಗೆ ಮುಂದಾಗಿದ್ದವರಿಗೆ ಈ ತೀರ್ಪು ಒಂದು ಗಂಭೀರ ಸಂದೇಶವನ್ನು ರವಾನಿಸಲಿದೆ ಎಂದು ಅವರು ಹೇಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋರಿಕ್ಷಾ ಮತ್ತು 5 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇದೇ ವೇಳೆ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಹ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ಮಂಗಳೂರಿನ ಕಂಕನಾಡಿಯ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದಲ್ಲಿ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಆದರೆ, ಭಯೋತ್ಪಾದಕ ಕೃತ್ಯದ ಗಂಭೀರತೆಯನ್ನು ಪರಿಗಣಿಸಿದರೆ 10 ವರ್ಷಗಳ ಶಿಕ್ಷೆ ತೀರಾ ಕಡಿಮೆ ಎಂದು ಶರಣ್ ಪಂಪ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ. ಅಪರಾಧಿ ಶಿಕ್ಷೆಯನ್ನು ಕಡಿಮೆ ಮಾಡಿಸಿಕೊಳ್ಳುವ ಉದ್ದೇಶದಿಂದ ತಪ್ಪೊಪ್ಪಿಕೊಂಡಿರಬಹುದು ಎಂದು ಶಂಕಿಸಿರುವ ಅವರು, ಶಿಕ್ಷೆಯನ್ನು ಹೆಚ್ಚಿಸಲು ಎನ್‌ಐಎ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ಹಿಂದೆ ಇನ್ನೂ ಹಲವರ ಕೈವಾಡವಿರಬಹುದು ಎಂದು ಆರೋಪಿಸಿರುವ ಅವರು, ಸಮಗ್ರ ತನಿಖೆ ನಡೆಸಬೇಕು ಮತ್ತು ಮಂಗಳೂರಿನಲ್ಲಿ ಎನ್‌ಐಎ ಕಚೇರಿಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಚಿವ ಸುಧಾಕರ್‌ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ-ಡಿಸಿಎಂ

Leave a Reply

Your email address will not be published. Required fields are marked *