ನವದೆಹಲಿ: ಖಾರಿಫ್ ಹಂಗಾಮಿನ ಕೃಷಿ ಕೆಲಸಗಳಲ್ಲಿ ತೊಡಗಿರುವ ದೇಶದ ರೈತರಿಗೆ ಕೇಂದ್ರ ಸರ್ಕಾರ ದೊಡ್ಡ ಸಮಾಧಾನದ ಸುದ್ದಿ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕವಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗುವ ಭೀತಿ ಇತ್ತು. ಆದರೆ, ರೈತರ ಮೇಲೆ ಈ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸಚಿವ ಸಂಪುಟವು ಸಬ್ಸಿಡಿ ಮೊತ್ತವನ್ನು ಶೇ. 12ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ.
ಬೆಲೆ ಹೆಚ್ಚಾದ್ರು ಚಿಂತೆ ಮಾಡಬೇಕಿಲ್ಲ
ಈ ಮಹತ್ವದ ನಿರ್ಧಾರದಿಂದಾಗಿ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗಿನ ಅವಧಿಗೆ ಸರ್ಕಾರವು ಒಟ್ಟು 41,533.81 ಕೋಟಿ ರೂಪಾಯಿಗಳನ್ನು ರಸಗೊಬ್ಬರ ಸಬ್ಸಿಡಿಗಾಗಿ ವ್ಯಯಿಸಲಿದೆ. ಇದು ಕಳೆದ ವರ್ಷದ ಖಾರಿಫ್ ಹಂಗಾಮಿಗೆ ಹೋಲಿಸಿದರೆ ಸುಮಾರು 4,317 ಕೋಟಿ ರೂಪಾಯಿಗಳಷ್ಟು ಅಧಿಕವಾಗಿದೆ. ಇದರ ನೇರ ಲಾಭವೆಂದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆ ಎಷ್ಟೇ ಹೆಚ್ಚಾದರೂ, ನಮ್ಮ ರೈತರಿಗೆ ಮಾತ್ರ ಹಳೆಯ ರಿಯಾಯಿತಿ ದರದಲ್ಲೇ ಗೊಬ್ಬರ ಸಿಗಲಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾತನಾಡಿ, “ಕೋವಿಡ್ ಇರಲಿ ಅಥವಾ ಇಂದಿನ ಜಾಗತಿಕ ಯುದ್ಧದ ಸನ್ನಿವೇಶವಿರಲಿ, ಪ್ರಧಾನಿ ಮೋದಿ ಅವರು ಯಾವಾಗಲೂ ರೈತರಿಗೆ ರಕ್ಷಣಾ ಕವಚವಾಗಿ ನಿಂತಿದ್ದಾರೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದ ರೈತರನ್ನು ರಕ್ಷಿಸುವುದೇ ಸರ್ಕಾರದ ಗುರಿ,” ಎಂದು ತಿಳಿಸಿದರು.
ರೈತರ ಕೈ ಹಿಡಿದ ಮೋದಿ
ಸರ್ಕಾರದ ಈ ಕ್ರಮದಿಂದಾಗಿ ಡಿಎಪಿ ಸೇರಿದಂತೆ ಒಟ್ಟು 28 ವಿವಿಧ ಬಗೆಯ ರಸಗೊಬ್ಬರಗಳು ರೈತರಿಗೆ ಸುಲಭವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ. ರಂಜಕ ಮತ್ತು ಪೊಟ್ಯಾಶ್ (P&K) ಯುಕ್ತ ಗೊಬ್ಬರಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕೇಂದ್ರ ಸರ್ಕಾರ ಭರವಸೆ ನೀಡಿದ್ದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಕೈಹಿಡಿಯಲು ಮುಂದಾಗಿದೆ.
