TOP NEWS

BY Vijayendra: ಸಿಎಂ ಬದಲಾವಣೆ ವಿಚಾರ: ಬಿ.ವೈ. ವಿಜಯೇಂದ್ರ ಭವಿಷ್ಯವಾಣಿ

by vijayendra prediction over cm change row

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತಾದ ಚರ್ಚೆಗಳು ಮತ್ತೆ ತೀವ್ರಗೊಂಡಿವೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಭವಿಷ್ಯ ನುಡಿದಿದ್ದರೆ, ಅತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ದಿನಾಂಕವೊಂದೇ ಬಾಕಿ ಎಂದ ವಿಜಯೇಂದ್ರ: ಮೈಸೂರಿನಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, “ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವ ಸಮಯ ಹತ್ತಿರ ಬಂದಿದೆ, ಕೇವಲ ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಇದೆ,” ಎಂದು ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ನಿರಂತರ ಕಿತ್ತಾಟ ನಡೆಯುತ್ತಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳು ದೆಹಲಿಗೆ ಪರಸ್ಪರ ಪೈಪೋಟಿಯ ಮೇಲೆ ಭೇಟಿ ನೀಡುತ್ತಿವೆ. ಈ ಇಬ್ಬರ ಜಗಳದ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮದೇ ಆದ ಲೆಕ್ಕಾಚಾರದಲ್ಲಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ. ಅಲ್ಲದೆ, ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ ಎಂದು ವ್ಯಂಗ್ಯವಾಡಿದ್ದಾರೆ.

ಹೈಕಮಾಂಡ್ ನಿರ್ಧಾರವೇ ನಮಗೆ ಪ್ರಸಾದ ಎಂದ ಡಿಕೆಶಿ: ಇನ್ನೊಂದೆಡೆ, ನಾಯಕತ್ವ ಬದಲಾವಣೆಯ ಗುಸುಗುಸು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಹೈಕಮಾಂಡ್ ನಿರ್ಧಾರಕ್ಕೆ ತಾವು ಸಂಪೂರ್ಣವಾಗಿ ತಲೆಬಾಗುವುದಾಗಿ ತಿಳಿಸಿದ್ದಾರೆ. “ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಏನೇ ಹೇಳಿದರೂ ನಮಗೆ ಅದು ಪ್ರಸಾದವಿದ್ದಂತೆ. ಅವರು ಏನು ಹೇಳುತ್ತಾರೋ ಅದರಂತೆ ನಾವು ನಡೆಯುತ್ತೇವೆ,” ಎನ್ನುವ ಮೂಲಕ ಹೈಕಮಾಂಡ್ ಸೂಚನೆಯೇ ಅಂತಿಮ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿರುವುದರಿಂದ, ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕತ್ವದ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಈ ವಾಕ್ಸಮರ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಬೆಳಗಾವಿ ಬಿಸಿಲಿಗೆ ಪೊಲೀಸ್ ಹೈಟೆಕ್ ಮೊರೆ: ಸೋಲಾರ್ ಟೋಪಿ ಧರಿಸಿ ಟ್ರಾಫಿಕ್ ಸಿಬ್ಬಂದಿ ಕರ್ತವ್ಯ

Leave a Reply

Your email address will not be published. Required fields are marked *