ನವದೆಹಲಿ: ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (World Cup) ಪಂದ್ಯಗಳನ್ನ ಆಡಲು ಬಾಂಗ್ಲಾದೇಶ ನಿರಾಕರಣೆ ಮಾಡಿದ್ದು, ಈ ವಿಚಾರವನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ತಿಳಿಸಿದೆ.
ಫೆಬ್ರವರಿ 7 ರಿಂದ ವಿಶ್ವಕಪ್ ಆರಂಭ
ಫೆಬ್ರವರಿ 7 ರಿಂದ ಪ್ರಾರಂಭವಾಗುವ ಟೂರ್ನಮೆಂಟ್‌ಗಾಗಿ ಬಾಂಗ್ಲಾದೇಶ ತಂಡವು ಭಾರತಕ್ಕೆ ಬರುತ್ತದೆಯೇ ಎನ್ನುವ ವಿಚಾರವಾಗಿ ಕಳೆದ ಕೆಲ ಸಮಯದಿಂದ ಅನೇಕ ಗೊಂದಲಗಳಿದ್ದವು, ಇದೀಗ 2026ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಬೇಡಿಕೆಯ ಮೇಲೆ ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಸಭೆ ಮಾಡುತ್ತಿದೆ. ಸದ್ಯದ ವೇಳಾಪಟ್ಟಿ ಪ್ರಕಾರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ನಾಲ್ಕು ಪಂದ್ಯಗಳನ್ನು ಭಾರತದಲ್ಲಿ ಆಡಲಿದ್ದು, ಮೊದಲ ಮೂರು ಪಂದ್ಯಗಳು ಕೋಲ್ಕತ್ತಾದಲ್ಲಿ ಮತ್ತು ಉಳಿದ ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ.
ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ
ಭಾರತದಲ್ಲಿ ಆಡಲ್ಲ ಎಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಅಲ್ಲಿನ ಸರ್ಕಾರದ ಬೆಂಬಲ ಇದೆ. ಹಾಗಾಗಿ ತನ್ನ ಪಂದ್ಯಗಳನ್ನು ಸಹ-ಆತಿಥ್ಯ ವಹಿಸಿರುವ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಪ್ರಯತ್ನ ಮಾಡುತ್ತಿದೆ. ಐಸಿಸಿ ಸಭೆಯ ಹಿಂದಿನ ದಿನದಂದು, ಪಿಸಿಬಿ ಸಹ ಜಾಗತಿಕ ಸಂಸ್ಥೆಗೆ ಪತ್ರ ಬರೆದಿದ್ದು, ಈ ಪ್ರದೇಶದಲ್ಲಿನ ರಾಜಕೀಯ ಅಸ್ಥಿರತೆಯನ್ನು ಉಲ್ಲೇಖಿಸಿ ಬಿಸಿಬಿಯ ನಿಲುವನ್ನು ಬೆಂಬಲಿಸುವುದಾಗಿ ತಿಳಿಸಿದೆ
ಕಳೆದ ವಾರಾಂತ್ಯದಲ್ಲಿ ಢಾಕಾದಲ್ಲಿ ನಡೆದ ಸಭೆ ಸೇರಿದಂತೆ ಐಸಿಸಿ ಮತ್ತು ಬಿಸಿಬಿ ಈ ವಿಷಯದ ಬಗ್ಗೆ ಹಲವು ಚರ್ಚೆಗಳನ್ನು ನಡೆಸಿವೆ, ಆದರೆ ಎರಡೂ ಕಡೆಯವರು ತಮ್ಮ ನಿಲುವನ್ನು ಬದಲಾಯಿಸಿಲ್ಲ. ಪಂದ್ಯಾವಳಿಯನ್ನು ವೇಳಾಪಟ್ಟಿಯ ಪ್ರಕಾರ ನಡೆಸಬೇಕೆಂದು ಐಸಿಸಿ ಒತ್ತಾಯಿಸಿದ್ದರೂ, ಬಿಸಿಬಿ ತಮ್ಮ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದೆ ಎನ್ನಲಾಗಿದೆ.
