TOP NEWS

GBA: ಬಡ ವ್ಯಾಪಾರಿಗಳ ಅಂಗಡಿಗಳ ಮೇಲೆ ಜೆಸಿಬಿ ದಾಳಿ: ಜಿಬಿಎ ದರ್ಪದ ವಿರುದ್ಧ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ!

Vatal Nagaraj leads unique Crowbar March against GBA over demolition drive

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಫುಟ್‌ಪಾತ್ ಬದಿಯ ಸಣ್ಣ ಮತ್ತು ಬಡ ವ್ಯಾಪಾರಿಗಳ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕ್ರಮದ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ದಬ್ಬಾಳಿಕೆಯನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಹಳೇ ಬಿಬಿಎಂಪಿ ಕಚೇರಿ ಬಳಿ ಇರುವ ಜಿಬಿಎ ಕಚೇರಿ ಮುಂಭಾಗದಲ್ಲಿ ಬೃಹತ್ ‘ಗುದ್ದಲಿ ಮೆರವಣಿಗೆ’ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ಸರ್ಕಾರದ ವಿರುದ್ಧ ಕಿಡಿಕಾರಿದ ವಾಟಾಳ್‌ ನಾಗರಾಜ್‌

ಬದುಕಿಗಾಗಿ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳನ್ನೇ ನಂಬಿಕೊಂಡಿರುವ ಬಡವರು, ದೀನದಲಿತರು ಮತ್ತು ದಿನಗೂಲಿ ನೌಕರರ ಅಂಗಡಿ ಮುಂಗಟ್ಟುಗಳನ್ನು ಜಿಬಿಎ ಅಧಿಕಾರಿಗಳು ಏಕಾಏಕಿ ಜೆಸಿಬಿ ಬಳಸಿ ಧ್ವಂಸಗೊಳಿಸುತ್ತಿರುವುದು ಖಂಡನೀಯ ಎಂದು ವಾಟಾಳ್ ನಾಗರಾಜ್ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಯಾವುದೇ ರೀತಿಯ ಮುನ್ಸೂಚನೆ ನೀಡದೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಈ ರೀತಿ ಅಮಾನವೀಯವಾಗಿ ವರ್ತಿಸುವುದು ಅಕ್ಷಮ್ಯ ಅಪರಾಧ ಎಂದು ಅವರು ಕಿಡಿಕಾರಿದ್ದಾರೆ.

ಪಾದಚಾರಿಗಳಿಗೆ ಜಾಗವಿಲ್ಲ ಎಂಬ ನೆಪ ಹೇಳಿ, ಕಷ್ಟಪಟ್ಟು ದುಡಿಯುವ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಜಿಬಿಎ ನಡವಳಿಕೆಯು ಸರ್ವಾಧಿಕಾರ ಮತ್ತು ದರ್ಪದ ಪರಮಾವಧಿಯಾಗಿದೆ. ಈ ಅತ್ಯಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿರುವ ಅವರು, ಸಂಕಷ್ಟದಲ್ಲಿರುವ ಬಡ ವ್ಯಾಪಾರಿಗಳ ಪರವಾಗಿ ಧ್ವನಿ ಎತ್ತಲು ಸಾರ್ವಜನಿಕರು ಹಾಗೂ ಮಾಧ್ಯಮ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಆಪರೇಷನ್ ಫುಟ್‌ಪಾತ್ ನಿಲ್ಲಲ್ಲ ಎಂದ ಕೃಷ್ಣ ಬೈರೇಗೌಡ

ಬೆಂಗಳೂರಿನಲ್ಲಿ ಪಾದಚಾರಿಗಳ ರಕ್ಷಣೆಗಾಗಿ ಆರಂಭಿಸಲಾಗಿರುವ ‘ಆಪರೇಷನ್ ಫುಟ್‌ಪಾತ್’ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಪ್ರಮುಖರೊಂದಿಗೆ ನಡೆಸಿದ ಮಹತ್ವದ ಸಭೆಯ ಬಳಿಕ ಮಾತನಾಡಿದ ಅವರು, ಈ ಮಹತ್ವದ ಕಾರ್ಯಾಚರಣೆಯು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯವೇ ನಡೆಯುತ್ತಿದ್ದು, ಮುಂದಿನ ದಿನಗಳಲ್ಲೂ ಹೀಗೆಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಫುಟ್‌ಪಾತ್ ಒತ್ತುವರಿ ಮುಕ್ತಗೊಳಿಸುವ ಅನಿವಾರ್ಯತೆಯನ್ನು ಸಚಿವರು ಅಂಕಿ-ಅಂಶಗಳ ಸಮೇತ ವಿವರಿಸಿದರು. ಈ ಕಾರ್ಯಾಚರಣೆಯು ಬಡ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕೈಗೊಂಡಿರುವ ಕ್ರಮವಲ್ಲ. ಬದಲಿಗೆ, ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತ ರಸ್ತೆ ಹಾಗೂ ಮುಕ್ತವಾಗಿ ನಡೆದಾಡಲು ಪಾದಚಾರಿ ಮಾರ್ಗ ಕಲ್ಪಿಸಿಕೊಡುವುದು ಸರ್ಕಾರದ ಏಕೈಕ ಆಶಯವಾಗಿದೆ. ನಗರದಲ್ಲಿ ಫುಟ್‌ಪಾತ್‌ಗಳು ಒತ್ತುವರಿಯಾಗಿರುವುದರಿಂದ ಅನಿವಾರ್ಯವಾಗಿ ಮುಖ್ಯ ರಸ್ತೆಯಲ್ಲೇ ನಡೆದಾಡುವಾಗ ಸಂಭವಿಸಿದ ಅಪಘಾತಗಳಲ್ಲಿ ಇದುವರೆಗೆ ಸುಮಾರು 900 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಅಮೂಲ್ಯ ಜೀವಗಳನ್ನು ಉಳಿಸುವ ಕಾಳಜಿಯಿಂದ ನ್ಯಾಯಾಲಯದ ನಿರ್ದೇಶನದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ರಾಜಧಾನಿಯಲ್ಲಿ ಒಟ್ಟು 18 ಸಾವಿರ ರಸ್ತೆಗಳಿದ್ದು, ನಾವು ಸದ್ಯ ಕಾರ್ಯಾಚರಣೆ ನಡೆಸುತ್ತಿರುವುದು ಕೇವಲ ಶೇಕಡಾ 10 ರಷ್ಟು, ಅಂದರೆ 1,500 ಪ್ರಮುಖ ರಸ್ತೆಗಳಲ್ಲಿ ಮಾತ್ರ. ಆದ್ದರಿಂದ ವ್ಯಾಪಾರಿಗಳು ಮುಖ್ಯ ರಸ್ತೆಗಳನ್ನು ಬಿಟ್ಟು ಪಕ್ಕದ ಲಿಂಕ್ ರಸ್ತೆಗಳಲ್ಲಿ ವ್ಯಾಪಾರ ಮಾಡಿಕೊಳ್ಳುವ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದರು.

ಜುಲೈ 1 ರಿಂದ ಜುಲೈ 8 ರವರೆಗಿನ ಕೇವಲ ಎಂಟು ದಿನಗಳ ಅವಧಿಯಲ್ಲಿ ಬೆಂಗಳೂರು ನಗರಾದ್ಯಂತ ಬರೋಬ್ಬರಿ 430 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಕೇವಲ ಬುಧವಾರ ಒಂದೇ ದಿನ ಭರ್ಜರಿ ಕಾರ್ಯಾಚರಣೆ ನಡೆಸಿ 44.3 ಕಿಲೋಮೀಟರ್ ವ್ಯಾಪ್ತಿಯನ್ನು ಕ್ಲೀನ್ ಮಾಡಲಾಗಿದೆ. ವಲಯವಾರು ಲೆಕ್ಕಾಚಾರ ನೋಡುವುದಾದರೆ, ಪಶ್ಚಿಮ ವಲಯದಲ್ಲಿ ಅತ್ಯಧಿಕವಾಗಿ 115.02 ಕಿ.ಮೀ., ಉತ್ತರ ವಲಯದಲ್ಲಿ 104.15 ಕಿ.ಮೀ., ದಕ್ಷಿಣ ವಲಯದಲ್ಲಿ 80.06 ಕಿ.ಮೀ., ಪೂರ್ವ ವಲಯದಲ್ಲಿ 69.32 ಕಿ.ಮೀ. ಹಾಗೂ ಕೇಂದ್ರ ವಲಯದಲ್ಲಿ 61.45 ಕಿ.ಮೀ. ಉದ್ದದ ಫುಟ್‌ಪಾತ್‌ಗಳನ್ನು ತೆರವುಗೊಳಿಸಲಾಗಿದೆ.

ಕೇವಲ ಬಡ ವ್ಯಾಪಾರಿಗಳನ್ನಷ್ಟೇ ಗುರಿಯಾಗಿಸಿಕೊಂಡು ಈ ಕ್ರಮ ಜರುಗಿಸಲಾಗುತ್ತಿದೆ ಎಂಬ ಆರೋಪವನ್ನು ಸಚಿವರು ತಳ್ಳಿಹಾಕಿದರು. ದೊಡ್ಡ ದೊಡ್ಡ ಮಳಿಗೆಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮುಂಭಾಗ ಕಾನೂನುಬಾಹಿರವಾಗಿ ಫುಟ್‌ಪಾತ್ ಆಕ್ರಮಿಸಿಕೊಂಡಿದ್ದ ಎಲ್ಲಾ ಶಾಶ್ವತ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಇದರ ಭಾಗವಾಗಿ ಫುಟ್‌ಪಾತ್ ಮೇಲಿದ್ದ 2,200 ಕ್ಕೂ ಹೆಚ್ಚು ಜಾಹೀರಾತು ಮತ್ತು ನಾಮಫಲಕಗಳನ್ನು ಕಿತ್ತೆಸೆಯಲಾಗಿದೆ. ಸಾರ್ವಜನಿಕರ ನಡಿಗೆಗೆ ಅಡ್ಡಿಯಾಗುವಂತೆ ಅಂಗಡಿಗಳ ಮುಂದೆ ಅಕ್ರಮವಾಗಿ ನಿರ್ಮಿಸಿದ್ದ 1,580 ಕಡೆಗಳ ಕಾಂಕ್ರೀಟ್ ರಾಂಪ್‌ಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ. ಜೊತೆಗೆ, ಪಾದಚಾರಿ ಮಾರ್ಗವನ್ನು ಆವರಿಸುವಂತೆ ಅಳವಡಿಸಲಾಗಿದ್ದ 1,700 ಕ್ಕೂ ಹೆಚ್ಚು ಕಡೆಗಳ ಕಬ್ಬಿಣ ಹಾಗೂ ಫೈಬರ್ ಶೀಟ್‌ಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಎಚ್ಚರದಲ್ಲಿ ಕೆಲಸ ಮಾಡಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

Leave a Reply

Your email address will not be published. Required fields are marked *