ನವದೆಹಲಿ: ಅಯೋಧ್ಯೆಯ ರಾಮ ಮಂದಿರಕ್ಕೆ (Ram Mandir) ಬಂದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಒತ್ತಾಯಿಸಿದೆ. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಪ್ಪಿಸಲು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು ಅತ್ಯಗತ್ಯ ಎಂದು ಶುಕ್ರವಾರ ಹೇಳಿಕೆ ನೀಡಿರುವ ಆರ್‌ಎಸ್‌ಎಸ್, ಈ ವಂಚನೆಯಿಂದಾಗಿ ರಾಮಭಕ್ತರ ಮನಸ್ಸಿಗೆ ತೀವ್ರ ‘ನೋವು’ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಹೇಳಿಕೆ ಬಿಡುಗಡೆ ಮಾಡಿದ ಆರ್‌ಎಸ್‌ಎಸ್
ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ಇಡೀ ಹಿಂದೂ ಸಮಾಜವು ಈ ಸಂದರ್ಭದಲ್ಲಿ ಸಂಯಮ ಮತ್ತು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ, ಹಿಂದೂ ವಿರೋಧಿ ಶಕ್ತಿಗಳು ಈ ಘಟನೆಯನ್ನು ದುರುಪಯೋಗಪಡಿಸಿಕೊಂಡು ಸನಾತನ ಧರ್ಮದ ವಿರುದ್ಧ ಅಪಪ್ರಚಾರ ಮಾಡಲು ಅವಕಾಶ ನೀಡಬಾರದು ಎಂದು ಅವರು ಎಚ್ಚರಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು (SIT) ಈ ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಕ್ತರ ನಂಬಿಕೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ಮತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.
Statement issued by Dattatreya Hosabale, Sarkaryavah (General Secretary) of the Rashtriya Swayamsevak Sangh (RSS).
— RSS (@RSSorg) July 3, 2026
New Delhi, July 3, 2026
The grand temple constructed at the Shri Ram Janmabhoomi has become a center of reverence, faith, and devotion for the entire Hindu society,… pic.twitter.com/ppdkc8kuwU
ಏನಿದು ಹಗರಣ?
ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ಹೊತ್ತಿನಲ್ಲಿ ಹೊರಬಂದಿರುವ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಭಾರಿ ಚಂಡಮಾರುತ ಎಬ್ಬಿಸಿದೆ. ಸದ್ಯ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಿದೆ. ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಬಂಧಿತ ಇತರ ಆರೋಪಿಗಳಾಗಿದ್ದಾರೆ.
ಈ ವಂಚನೆ ಜಾಲದ ಆಳ ತಿಳಿಯಲು ಎಸ್‌ಐಟಿ ತಂಡವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಳೆದ ಐದು ವರ್ಷಗಳ ಆಯವ್ಯಯ ಖಾತೆಗಳನ್ನು ಮರು-ಆಡಿಟ್ (Re-audit) ಮಾಡಲು ನಿರ್ಧರಿಸಿದೆ. ಈ ಮರು-ಪರಿಶೀಲನೆಯು ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದ ವೆಚ್ಚಗಳು ಮಾತ್ರವಲ್ಲದೆ, ದೇಶ-ವಿದೇಶಗಳ ಭಕ್ತರಿಂದ ದೇಣಿಗೆ ರೂಪದಲ್ಲಿ ಬಂದಿರುವ ಬಂಗಾರ, ಬೆಳ್ಳಿ ಮತ್ತು ಇತರೆ ಆಭರಣಗಳ ಲೆಕ್ಕಾಚಾರವನ್ನೂ ಒಳಗೊಂಡಿರಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ಅವಿನಾಶ್ ಶುಕ್ಲಾನಿಂದ 20.39 ಲಕ್ಷ ರೂ., ಕರುಣೇಶ್ ಪಾಂಡೆಯಿಂದ 18.07 ಲಕ್ಷ ರೂ., ಅನುಕಲ್ಪ್ ಮಿಶ್ರಾನಿಂದ 16.82 ಲಕ್ಷ ರೂ., ಲವ್‌ಕುಶ್ ಮಿಶ್ರಾನಿಂದ 14.25 ಲಕ್ಷ ರೂ., ರಮಾಶಂಕರ್ ಮಿಶ್ರಾನಿಂದ 7.32 ಲಕ್ಷ ರೂ. ಹಾಗೂ ಟಿನ್ನು ಯಾದವನಿಂದ 1 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಸ್ವಲ್ಪ ಪ್ರಮಾಣದ ಚಿನ್ನ, ಸುಮಾರು 375 ಗ್ರಾಂ ಬೆಳ್ಳಿ ಮತ್ತು 1,121 ಯುಎಸ್ ಡಾಲರ್ ವಿದೇಶಿ ಹಣವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಕಚ್ಚಾ ತೈಲ ದರ ಕುಸಿತ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಾ?
