TOP NEWS

Tamil Nadu: ತಮಿಳುನಾಡು ಅಸೆಂಬ್ಲಿಯಲ್ಲಿ ‘ವಿಜಯ್ ವರ್ಸಸ್ ಉದಯನಿಧಿ’ ಕದನ: ರಾಜಕೀಯ ಜಿದ್ದಾಜಿದ್ದಿಗೆ ಕೌಟುಂಬಿಕ ಕೋರ್ಟ್ ಟ್ವಿಸ್ಟ್

tamil nadu udayanidhi stalin taunts vijay over his wife divorce case in assembly

ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭೆಯು ಇದೀಗ ಇಬ್ಬರು ಯುವ ರಾಜಕೀಯ ನಾಯಕರ ತೀರಾ ವೈಯಕ್ತಿಕ ಮಟ್ಟದ ವಾಗ್ದಾಳಿಗೆ ವೇದಿಕೆಯಾಗಿದೆ. ಮುಖ್ಯಮಂತ್ರಿ ವಿಜಯ್ ಹಾಗೂ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ರಾಜಕೀಯ ಸಮರ ಹದ್ದುಮೀರಿದ್ದು, ಪರಸ್ಪರರ ಖಾಸಗಿ ಬದುಕನ್ನು ಅಸೆಂಬ್ಲಿಯಲ್ಲೇ ಕೆದಕುವ ಹಂತಕ್ಕೆ ತಲುಪಿದೆ. ಸದನದಲ್ಲಿ ಸಿಎಂ ವಿಜಯ್ ಮಾಡಿದ ಭಾಷಣಕ್ಕೆ ಕೌಂಟರ್ ಕೊಡುವ ನೆಪದಲ್ಲಿ ಉದಯನಿಧಿ ಅವರು, ವಿಜಯ್ ಅವರ ವೈವಾಹಿಕ ಜೀವನದ ವಿಚ್ಛೇದನ ಪ್ರಕರಣವನ್ನು ಎಳೆದು ತಂದು ಭಾರಿ ಸಂಚಲನ ಮೂಡಿಸಿದ್ದಾರೆ.

ವಿಜಯ್ ಸಂಸಾರಿಕ ವಿಚಾರ ಪ್ರಸ್ತಾಪಿಸಿದ ಜೂನಿಯರ್ ಸ್ಟಾಲಿನ್ ಸಿಎಂ ವಿಜಯ್ ಅವರ ರಾಜಕೀಯ ನಿಲುವುಗಳನ್ನು ಟೀಕಿಸುವ ಭರದಲ್ಲಿ ತೀರಾ ಖಾಸಗಿ ವಿಷಯಕ್ಕೆ ಕೈಹಾಕಿದ ಉದಯನಿಧಿ ಸ್ಟಾಲಿನ್, “ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಪತಿಯನ್ನು ಹುಡುಕುತ್ತಿರುವ ಪತ್ನಿಯ ಕಥೆ ಇಡೀ ತಮಿಳುನಾಡಿಗೆ ಚೆನ್ನಾಗಿ ಗೊತ್ತಿದೆ,” ಎಂದು ವ್ಯಂಗ್ಯವಾಡಿದರು. ಇದು ವಿಜಯ್ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಲು ಡಿಸೆಂಬರ್ 2025 ರಲ್ಲಿ ಚೆಂಗಲ್ಪಟ್ಟು ಫ್ಯಾಮಿಲಿ ಕೋರ್ಟ್‌ನಲ್ಲಿ ಸಲ್ಲಿಸಿರುವ ಡಿವೋರ್ಸ್ ಅರ್ಜಿಯ ನೇರ ಉಲ್ಲೇಖವಾಗಿತ್ತು. ಪ್ರಸ್ತುತ ಈ ಹೈಪ್ರೊಫೈಲ್ ಕೇಸ್ ನ್ಯಾಯಾಲಯದಲ್ಲಿದ್ದು, ಮುಂದಿನ ವಿಚಾರಣೆ ಆಗಸ್ಟ್ 7 ಕ್ಕೆ ನಿಗದಿಯಾಗಿದೆ.

ರೈತ ಹೋರಾಟದ ಹಿಂದೆ ವಿರೋಧ ಪಕ್ಷಗಳ ಪ್ರೇರಣೆಯಿದೆ ಎಂದು ಹೇಳುವ ಮೂಲಕ ವಿಜಯ್ ಅವರು ಅನ್ನದಾತರಿಗೆ ಅಪಮಾನ ಮಾಡಿದ್ದಾರೆ ಎಂದು ಉದಯನಿಧಿ ಕಿಡಿಕಾರಿದರು. “ಅವರು ಸದನದಲ್ಲಿ ನಿಂತು ಸಣ್ಣ ಕಥೆಗಳನ್ನು ಹೇಳುತ್ತಾ ರೈತರ ಘನತೆಗೆ ಧಕ್ಕೆ ತರುತ್ತಿದ್ದಾರೆ. ಕಥೆ ಹೇಳುವ ಮುನ್ನ ಚೆಂಗಲ್ಪಟ್ಟು ಕೋರ್ಟ್‌ನಲ್ಲಿ ನಡೆಯುತ್ತಿರುವ ತಮ್ಮದೇ ಸ್ವಂತ ಕಥೆಯನ್ನು ಸಿಎಂ ನೆನಪಿಸಿಕೊಳ್ಳಲಿ, ಸದ್ಯಕ್ಕಂತೂ ಅದನ್ನು ಮರೆಯದಿರಲಿ,” ಎಂದು ತಿರುಗೇಟು ನೀಡಿದರು.

ವಿಧಾನಸಭೆಯನ್ನು ಶೂಟಿಂಗ್ ಸ್ಪಾಟ್ ಮಾಡಿದ್ದಾರೆ: ಉದಯನಿಧಿ ವ್ಯಂಗ್ಯ ಅಧಿವೇಶನ ಮುಗಿದ ಬಳಿಕ ಮಾಧ್ಯಮಗಳ ಎದುರು ಸಿಎಂ ವಿಜಯ್ ಅವರ ಭಾಷಣವನ್ನು ಅಣಕಿಸಿದ ಉದಯನಿಧಿ, “ಟಿವಿಕೆ (TVK) ಪಕ್ಷದವರು ವಿಧಾನಸಭೆಯನ್ನು ಸಿನಿಮಾ ಥಿಯೇಟರ್ ಮಾಡಿಕೊಂಡಿದ್ದಾರೆ. ಇವರ ಶಾಸಕರು ಈಗಲೇ ಸೀಟಿ ಹೊಡೆಯುತ್ತಿದ್ದಾರೆ, ಇನ್ನು ಕೆಲ ದಿನ ಹೋದರೆ ಮಂತ್ರಿಗಳು ಐಟಂ ಸಾಂಗ್‌ಗಳಿಗೆ ಡ್ಯಾನ್ಸ್ ಮಾಡಿದರೂ ಅಚ್ಚರಿಯಿಲ್ಲ,” ಎಂದು ಲೇವಡಿ ಮಾಡಿದರು. ಮುಖ್ಯಮಂತ್ರಿಗಳ 30 ನಿಮಿಷಗಳ ಭಾಷಣ ಕೇವಲ ಸೋಷಿಯಲ್ ಮೀಡಿಯಾ ರೀಲ್ಸ್‌ಗಷ್ಟೇ ಸೀಮಿತವಾಗಿದ್ದು, ಅದೊಂದು ಕೃತಕ ಹಾಗೂ ಮೊದಲೇ ಸಿದ್ಧಪಡಿಸಿದ ಸ್ಕ್ರಿಪ್ಟ್ ನಂತಿತ್ತು ಎಂದರು.

“ಅವರು ವಿಧಾನಸಭೆಯಲ್ಲೂ ಆಕ್ಟಿಂಗ್ ಮಾಡುತ್ತಿದ್ದಾರೆ. ಇಲ್ಲಿ ಸ್ಪೀಕರ್ ಅವರು ‘ಆಕ್ಷನ್’ ಮತ್ತು ‘ಕಟ್’ ಹೇಳುವ ನಿರ್ದೇಶಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಕ್ಯಾರವಾನ್, ಮೇಕಪ್ ಆರ್ಟಿಸ್ಟ್‌ಗಳು ಹಾಗೂ ಸ್ಟಂಟ್ ಮಾಸ್ಟರ್‌ಗಳು ಬರಲಿದ್ದಾರೆ. ಇವರೆಲ್ಲಾ ಸೇರಿ ಪವಿತ್ರ ಸದನವನ್ನು ಕೇವಲ ಶೂಟಿಂಗ್ ಸ್ಪಾಟ್ ಮಾಡಲಿದ್ದಾರೆ,” ಎಂದು ಜೂನಿಯರ್ ಸ್ಟಾಲಿನ್ ತೀಕ್ಷ್ಣವಾಗಿ ಟೀಕಿಸಿದರು.

ಸದನದಲ್ಲಿ ಜಗಳದ ಕಿಡಿ ಹೊತ್ತಿಕೊಂಡಿದ್ದು ಹೇಗೆ? ಇದಕ್ಕೂ ಮುನ್ನ ಅಸೆಂಬ್ಲಿಯಲ್ಲಿ ಮಾತನಾಡಿದ್ದ ಸಿಎಂ ವಿಜಯ್, “ಪಕ್ಷದ ನಿಧಿ ಸಂಗ್ರಹದ ನೆಪದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿರುವ ಡಿಎಂಕೆ ನಾಯಕರಿಂದ ನಮ್ಮ ಸರ್ಕಾರ ಕಾಸು ಕಾಸನ್ನೂ ವಸೂಲಿ ಮಾಡಲಿದೆ,” ಎಂದು ನೇರ ವಾಗ್ದಾಳಿ ನಡೆಸಿದ್ದರು. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉದಯನಿಧಿ ಸ್ಟಾಲಿನ್, ಸಾಕ್ಷ್ಯಾಧಾರಗಳಿದ್ದರೆ ಮಾತ್ರ ಮಾತನಾಡಬೇಕು ಎಂದು ಪಾಯಿಂಟ್ ಆಫ್ ಆರ್ಡರ್ ಮಂಡಿಸಲು ಯತ್ನಿಸಿದರು. ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡದಿದ್ದಾಗ ಡಿಎಂಕೆ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಗದ್ದಲದ ನಡುವೆಯೂ ಭಾಷಣ ಮುಂದುವರಿಸಿದ ವಿಜಯ್, “ಹಿಂದಿನ ಡಿಎಂಕೆ ಸರ್ಕಾರದಂತೆ ಟಿವಿಕೆ ಎಂದಿಗೂ ಭ್ರಷ್ಟಾಚಾರದಲ್ಲಿ ಮುಳುಗುವುದಿಲ್ಲ, ಖಜಾನೆಯನ್ನು ಲೂಟಿ ಮಾಡಲು ಬಿಡುವುದಿಲ್ಲ,” ಎಂದು ಗುಡುಗಿದರು. ಇದೇ ವೇಳೆ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ಹಳೆಯ ವೈರಲ್ ಕೈ ಸನ್ನೆಯನ್ನು ವಿಜಯ್ ಅಣಕಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಇಬ್ಬರು ಯುವ ನಾಯಕರ ನಡುವಿನ ಯುದ್ಧ ಈಗ ಮತ್ತಷ್ಟು ತಾರಕಕ್ಕೇರುವಂತೆ ಮಾಡಿದೆ.

ಇದನ್ನೂ ಓದಿ: ಜೂನ್ 30ರ ಒಳಗಾಗಿ ಈ ಕೆಲಸ ಮಾಡದಿದ್ದರೆ ಗ್ಯಾಸ್ ಸಂಪರ್ಕ ಕಡಿತ ಗ್ಯಾರಂಟಿ!

Leave a Reply

Your email address will not be published. Required fields are marked *