ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲಾ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ನಡೆಸುತ್ತಿರುವ ಹುಸಿ ಬಾಂಬ್ ಇ-ಮೇಲ್ (Bomb Threat) ದಂಧೆ ಸಾರ್ವಜನಿಕ ವಲಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಜೂನ್ 19ರ ಶುಕ್ರವಾರದಂದು ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ದಾವಣಗೆರೆ, ಧಾರವಾಡ ಮತ್ತು ಕೋಲಾರದ ಕೋರ್ಟ್ ಆವರಣಗಳಿಗೆ ಏಕಕಾಲದಲ್ಲಿ ಬೆದರಿಕೆ ಇ-ಮೇಲ್ಗಳು ಬಂದಿವೆ. ನ್ಯಾಯಾಲಯಗಳ ಒಳಗೆ ಬಾಂಬ್ ಅಡಗಿಸಿಡಲಾಗಿದೆ ಎಂಬ ಮಾಹಿತಿ ಹರಡುತ್ತಿದ್ದಂತೆ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಂಗ ಸಿಬ್ಬಂದಿ ಪ್ರಾಣಭಯದಿಂದ ಆಚೆ ಓಡಿ ಬಂದಿದ್ದು, ಇಡೀ ಪೊಲೀಸ್ ಇಲಾಖೆ ತಕ್ಷಣವೇ ಅಲರ್ಟ್ ಆಗಿದೆ.
ಸೈನೈಡ್ ಅನಿಲ್ ಗುಂಡಿ ಸ್ಫೋಟಿಸುವುದಾಗಿ ಇ-ಮೇಲ್
ಈ ಸರಣಿ ಇ-ಮೇಲ್ಗಳ ಪೈಕಿ ಬಾಗಲಕೋಟೆ ನ್ಯಾಯಾಲಯಕ್ಕೆ ಬಂದ ಸಂದೇಶವು ಅತ್ಯಂತ ಭೀತಿ ಹುಟ್ಟಿಸುವಂತಿತ್ತು. ಮಧ್ಯಾಹ್ನ 2 ಗಂಟೆಯ ಒಳಗಾಗಿ ಕೋರ್ಟ್ ಆವರಣದಲ್ಲಿ ಭಾರಿ ವಿನಾಶಕಾರಿಯಾದ 23 ಸೈನೈಡ್ ಅನಿಲ ಗುಂಡಿಗಳನ್ನು ಸ್ಫೋಟಿಸಲಾಗುವುದು ಎಂದು ಆ ಮೇಲ್ನಲ್ಲಿ ಹೆದರಿಸಲಾಗಿತ್ತು. ಈ ಸಂದೇಶವು ಮೊದಲು ಚಿತ್ರದುರ್ಗದ ಜಿಲ್ಲಾ ಜಡ್ಜ್ ಅವರ ಇ-ಮೇಲ್ಗೆ ತಲುಪಿದ್ದು, ಅಲ್ಲಿಂದ ಬಾಗಲಕೋಟೆಗೆ ವರ್ಗಾವಣೆಯಾಗುತ್ತಿದ್ದಂತೆ ಇಡೀ ಜಿಲ್ಲಾ ರಕ್ಷಣಾ ಪಡೆ ಕಾರ್ಯಪ್ರವೃತ್ತವಾಗಿದೆ. ಶ್ವಾನದಳ ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ಜಡ್ಜ್ ಹಾಲ್ ಸೇರಿದಂತೆ ಇಡೀ ಕಟ್ಟಡವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಕೊನೆಗೆ ಯಾವುದೇ ಆಪತ್ತು ಇಲ್ಲದಿರುವುದು ಖಚಿತವಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ದಾವಣಗೆರೆ ನ್ಯಾಯಾಲಯಕ್ಕೂ ಬೆದರಿಕೆ ಕರೆ
ಇತ್ತ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ನ್ಯಾಯಾಲಯಕ್ಕೂ ಬಂದಿರುವ ಇ-ಮೇಲ್ ಸಂದೇಶವು ಕೇರಳದ ವಯನಾಡ್ ಜಿಲ್ಲೆಯಿಂದ ರವಾನೆಯಾಗಿದೆ ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಇನ್ನು ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ ಬಂದ ಬೆದರಿಕೆಯ ಹಿನ್ನೆಲೆಯಲ್ಲಿ ಗಲ್ ಪೇಟೆ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ, ದಿನದ ಎಲ್ಲಾ ನ್ಯಾಯಾಂಗ ಕಲಾಪಗಳನ್ನು ತುರ್ತಾಗಿ ರದ್ದುಪಡಿಸಿ ಇಡೀ ಆವರಣವನ್ನು ವಶಕ್ಕೆ ಪಡೆದು ಜಾಲಾಡಿದ್ದಾರೆ. ಅದೇ ರೀತಿ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋರ್ಟ್ ಕಾಂಪ್ಲೆಕ್ಸ್ನಲ್ಲೂ ಇಂತಹದ್ದೇ ಮೇಲ್ ಭೀತಿ ಸೃಷ್ಟಿಸಿದ್ದು, ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಅದೃಷ್ಟವಶಾತ್ ರಾಜ್ಯದ ಯಾವುದೇ ನ್ಯಾಯಾಲಯದಲ್ಲೂ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಇದು ಕಿಡಿಗೇಡಿಗಳ ಹುಸಿ ಕೃತ್ಯ ಎಂದು ಘೋಷಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆಗೆ ಸವಾಲು ಹಾಕಿರುವ ಈ ಅನಾಮಧೇಯ ಸೈಬರ್ ಅಪರಾಧಿಗಳನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ: ‘ಇವರು ಹೆತ್ತ ತಾಯಿಗೆ ದ್ರೋಹ ಬಗೆದ ಮೀರ್ ಸಾಧಕರು!’: ಬಿ.ವೈ. ವಿಜಯೇಂದ್ರ
