ಹೈದರಾಬಾದ್: ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ̈ (Allu Arjun) ಅವರಿಗೆ ಹೈದರಾಬಾದ್‌ನ ನ್ಯಾಯಾಲಯವು ಬಿಗ್ ಶಾಕ್ ನೀಡಿದ್ದು, ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಜೂನ್ 19ರ ಶುಕ್ರವಾರದಂದು ಅಧಿಕೃತ ಸಮನ್ಸ್ ಜಾರಿ ಮಾಡಿದೆ. ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಅಲ್ಲು ಅರ್ಜುನ್ ಸೇರಿದಂತೆ ಪ್ರಕರಣದ ಇತರ 19 ಆರೋಪಿಗಳಿಗೂ ನೋಟಿಸ್ ನೀಡಿದೆ. ಕಳೆದ 2024 ರ ಡಿಸೆಂಬರ್ 4 ರಂದು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನದ ವೇಳೆ ಚಿತ್ರಮಂದಿರದ ಮುಂದೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಒಟ್ಟು 23 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ನಟ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿ ಎಂದು ಹೆಸರಿಸಲಾಗಿದೆ.
ನಟನನ್ನ ನೋಡಲು ಜಮಾಯಿಸಿದ್ದ ಜನ
ಹೈದರಾಬಾದ್‌ನ ಆರ್.ಟಿ.ಸಿ ಕ್ರಾಸ್ ರೋಡ್ಸ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರದ ಮುಂದೆ ನೆಚ್ಚಿನ ನಟನನ್ನು ನೋಡಲು ಸಹಸ್ರಾರು ಅಭಿಮಾನಿಗಳು ಜಮಾಯಿಸಿದಾಗ ಈ ದುರಂತ ಸಂಭವಿಸಿತ್ತು. ಈ ಭೀಕರ ಕಾಲ್ತುಳಿತದಲ್ಲಿ 39 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರೆ, ಅವರ ಮಗ ಶ್ರೀತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ಮೃತ ರೇವತಿ ಅವರು ತಮ್ಮ ಪತಿ ಭಾಸ್ಕರ್ ಮತ್ತು ಇಬ್ಬರು ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದರು. ಮಗ ಶ್ರೀತೇಜ್ ಅಲ್ಲು ಅರ್ಜುನ್ ಅವರ ತೀವ್ರ ಅಭಿಮಾನಿಯಾಗಿದ್ದರಿಂದ ಇಡೀ ಕುಟುಂಬ ಸಿನಿಮಾಗೆ ಬಂದಿತ್ತು, ಆದರೆ ಈ ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟಿತ್ತು. ಘಟನೆ ನಡೆದಾಗ ನಟ ಅಲ್ಲು ಅರ್ಜುನ್ ಕೂಡ ಥಿಯೇಟರ್‌ನಲ್ಲೇ ಇದ್ದರು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್, ಅವರ ವೈಯಕ್ತಿಕ ತಂಡ ಹಾಗೂ ಥಿಯೇಟರ್ ಮಾಲೀಕರ ವಿರುದ್ಧ ಕೊಲೆಗೆ ಸಮಾನವಲ್ಲದ ಅಪರಾಧದ ನರಹತ್ಯೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಜನಸಮೂಹ ನಿಯಂತ್ರಿಸಲು ವಿಫಲ
ಈ ಪ್ರಕರಣದ ಕುರಿತು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ಮಾಹಿತಿ ನೀಡಿದ್ದು, ಪೊಲೀಸರ ತನಿಖೆಯಲ್ಲಿ ಥಿಯೇಟರ್ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮದ ಆಯೋಜಕರು ಜನಸಮೂಹವನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ. ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಯೋಜನೆಯ ಕೊರತೆಯೇ ಈ ದುರಂತಕ್ಕೆ ಕಾರಣವಾಗಿದ್ದು, ಈ ಸಂಬಂಧ 2025ರ ಡಿಸೆಂಬರ್ 24ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಥಿಯೇಟರ್ ಮಾಲೀಕರು, ಸಿಬ್ಬಂದಿ ಹಾಗೂ ಅಲ್ಲು ಅರ್ಜುನ್ ಮ್ಯಾನೇಜರ್ ಸೇರಿದಂತೆ 14 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಮುಂಗಡ ಜಾಮೀನು ಪಡೆದಿದ್ದ ಉಳಿದ 9 ಜನರಿಗೆ ನೋಟಿಸ್ ನೀಡಲಾಗಿದೆ. ಇನ್ನು ಈ ಘಟನೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಷ್ಟೊಂದು ದೊಡ್ಡ ಸಂಖ್ಯೆಯ ಜನ ಸೇರುವ ಮಾಹಿತಿ ಇದ್ದರೂ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆಯು ನಿರ್ಲಕ್ಷ್ಯ ವಹಿಸಿದೆ ಎಂದು ಕಟುವಾಗಿ ಟೀಕಿಸಿತ್ತು. ಸದ್ಯ ಜೂನ್ 22ರ ಸೋಮವಾರದಂದು ಅಲ್ಲು ಅರ್ಜುನ್ ನ್ಯಾಯಾಲಯಕ್ಕೆ ಹಾಜರಾಗಬೇಕಿರುವುದರಿಂದ ಇಡೀ ಚಿತ್ರರಂಗದ ಕಣ್ಣು ಈ ವಿಚಾರಣೆಯ ಮೇಲಿದೆ.
