TOP NEWS

Bengaluru: ಹಫ್ತಾ ವಸೂಲಿ, ಅಧಿಕಾರಿಗಳ ದರ್ಪಕ್ಕೆ ಬೇಸತ್ತ ವರ್ತಕರು: ಜೂನ್ 18 ರಿಂದ ಬೆಂಗಳೂರಿನಲ್ಲಿ ಬೇಕರಿ, ಸಣ್ಣ ಅಂಗಡಿಗಳು ಬಂದ್!

Bengaluru condiments association called for strike on june 18 against rowdies harassment

ಬೆಂಗಳೂರು: ರಾಜಧಾನಿಯ ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಬೇಕರಿ ಮಾಲೀಕರು ಅಸಹನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪುಡಿ ರೌಡಿಗಳ ಹಾವಳಿ, ಮಾಮೂಲಿಗಾಗಿ ಪೀಡಿಸುವ ದಂಧೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಿರಂತರ ಕಿರುಕುಳಕ್ಕೆ (Bengaluru) ಶಾಶ್ವತ ಪರಿಹಾರ ಕೋರಿ, ನಗರದ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಮತ್ತು ಬೀದಿಬದಿ ವ್ಯಾಪಾರಿಗಳು ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ.

ಬೆಂಗಳೂರು ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, “ನಮಗೆ ನೆಮ್ಮದಿಯಿಂದ ವ್ಯಾಪಾರ ಮಾಡಲು ಬಿಡಿ, ಇಲ್ಲವಾದರೆ ವಿಷ ಕೊಡಿ” ಎಂದು ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಜೂನ್ 18ರ ಗುರುವಾರ ಮುಂಜಾನೆ 5 ಗಂಟೆಯಿಂದಲೇ ನಗರದಾದ್ಯಂತ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳಲಿದೆ. ಪರಿಣಾಮವಾಗಿ ಅಂದು ಐಟಿ ನಗರಿಯ ಜನರಿಗೆ ಬೆಳಗ್ಗಿನ ಕಾಫಿ, ಟೀ, ಹಾಲು ಸೇರಿದಂತೆ ಬ್ರೆಡ್, ಹಣ್ಣು, ತರಕಾರಿ ಹಾಗೂ ತಿಂಡಿ-ತಿನಿಸುಗಳ ಲಭ್ಯತೆಯಲ್ಲಿ ಭಾರಿ ವ್ಯತ್ಯಯವಾಗುವ ಸಾಧ್ಯತೆಯಿದೆ.

58 ಸಾವಿರಕ್ಕೂ ಹೆಚ್ಚು ಅಂಗಡಿಗಳು ಕ್ಲೋಸ್: ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ

ಬೆಂಗಳೂರಿನ ಸಣ್ಣಪುಟ್ಟ ಚಿಲ್ಲರೆ ಅಂಗಡಿಗಳು, ಮೊಬೈಲ್ ಕ್ಯಾಂಟೀನ್‌ಗಳು, ಬೇಕರಿ ಹಾಗೂ ಬೀಡಾ ಸ್ಟಾಲ್‌ಗಳು ಸೇರಿದಂತೆ ಸುಮಾರು 58 ಸಾವಿರಕ್ಕೂ ಅಧಿಕ ವ್ಯಾಪಾರಿಗಳು ಈ ಬಂದ್‌ಗೆ ಕೈಜೋಡಿಸಿದ್ದಾರೆ. ಗುರುವಾರ ಇಡೀ ದಿನ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಲಿರುವ ವರ್ತಕರು, ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಂಗಡಿಗಳಿಗೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕುವುದು ಹಾಗೂ ಕೊಡದಿದ್ದರೆ ಹಲ್ಲೆ ಮಾಡುವ ಪ್ರಕರಣಗಳು ಮಿತಿಮೀರಿವೆ. ಮತ್ತೊಂದೆಡೆ, ಪೊಲೀಸರು ಸೇರಿದಂತೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ತಪಾಸಣೆಯ ಹೆಸರಿನಲ್ಲಿ ಸಣ್ಣ ವ್ಯಾಪಾರಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಸ್ವಾವಲಂಬಿ ಬದುಕು ನಡೆಸುವುದು ಕಷ್ಟಕರವಾಗಿದೆ ಎಂದು ಸಂಘಟನೆ ದೂರಿದೆ.

ಮುಷ್ಕರ ನಿರತ ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು:

  • ಸ್ಪಷ್ಟ ತಂಬಾಕು ನಿಯಮಾವಳಿ: ತಂಬಾಕು ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು, ಇಲ್ಲವೇ ಅದರ ಉತ್ಪಾದನೆಯನ್ನೇ ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು.
  • ಅಧಿಕಾರಿಗಳ ಜಪ್ತಿ ದರ್ಪಕ್ಕೆ ತಡೆ: ಸಣ್ಣ ವ್ಯಾಪಾರಿಗಳು ಕಾನೂನುಬದ್ಧವಾಗಿ ಹಣ ನೀಡಿ ತಂದಿರುವ ಸರಕುಗಳನ್ನು ಅಧಿಕಾರಿಗಳು ವಿನಾಕಾರಣ ಸೀಜ್ ಮಾಡುವುದನ್ನು ನಿಲ್ಲಿಸಬೇಕು.
  • ರೌಡಿಸಂಗೆ ಬ್ರೇಕ್: ಅಂಗಡಿ ಮಾಲೀಕರಿಂದ ಹಫ್ತಾ ವಸೂಲಿ ಮಾಡುವ ಹಾಗೂ ಬೆದರಿಕೆ ಹಾಕುವ ಪುಡಿ ರೌಡಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.

ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸ್ಥಳೀಯ ವ್ಯಾಪಾರಿಯೊಬ್ಬರು, “ಇತ್ತೀಚೆಗೆ ಪ್ರತಿಯೊಬ್ಬರೂ ಬಂದು ನಮಗೆ ಕಿರುಕುಳ ನೀಡುತ್ತಿದ್ದಾರೆ. ನೆಮ್ಮದಿಯಿಂದ ದುಡಿದು ತಿನ್ನಲು ಬಿಡುತ್ತಿಲ್ಲ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ನಾವೆಲ್ಲರೂ ಒಟ್ಟಾಗಿ ಅಂಗಡಿಗಳನ್ನು ಮುಚ್ಚಿ ಹೋರಾಟಕ್ಕೆ ಇಳಿಯುತ್ತಿದ್ದೇವೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: 3 ವರ್ಷಗಳಿಂದ ಇಲ್ಲ ಶಿಕ್ಷಕರು; ಮಕ್ಕಳ ಭವಿಷ್ಯಕ್ಕಾಗಿ ರಸ್ತೆಗಿಳಿದ ಕರೂರು ಹೋಬಳಿ ಗ್ರಾಮಸ್ಥರು

Leave a Reply

Your email address will not be published. Required fields are marked *