ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದಲ್ಲಿ ನಡೆದಿದ್ದ ಮಾಜಿ ಸೈನಿಕ ಸಂದೀಪ ಮಾಂಜರಿ ಅವರ ನಿಗೂಢ ಸಾವಿನ ಪ್ರಕರಣವು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ (Crime) ತಿರುವು ಪಡೆದುಕೊಂಡಿದೆ. ಕೇವಲ ಎರಡು ಕೋಟಿ ರೂಪಾಯಿ ಭಾರಿ ಮೊತ್ತದ ಇನ್ಶೂರೆನ್ಸ್ ಹಣವನ್ನು ಲೂಟಿ ಮಾಡಲು ಮತ್ತು ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ತಾವೇ ಸ್ಕೆಚ್ ಹಾಕಿ ಕೊಂದಿದ್ದಾರೆ ಎಂಬ ಗಂಭೀರ ಆರೋಪ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೇಳಿಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಮಣ್ಣು ಮಾಡಲಾಗಿದ್ದ ಶವವನ್ನು ಬರೋಬ್ಬರಿ ಮೂರು ತಿಂಗಳ ನಂತರ ಕಬರ್ರಿನಿಂದ ಹೊರತೆಗೆದು ತನಿಖೆ ನಡೆಸಿರುವುದು ಸದ್ಯ ಗಡಿ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಆಸ್ಪತ್ರೆಯಲ್ಲಿ ವಿಷ ನೀಡಿ ಕೊಲೆ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಂದೀಪ ಅವರು ಕೆಲ ತಿಂಗಳ ಹಿಂದೆ ಹುಕ್ಕೇರಿ ಜಾತ್ರೆ ಮುಗಿಸಿಕೊಂಡು ಊರಿಗೆ ಮರಳುವಾಗ ಭೀಕರ ರಸ್ತೆ ಅಪಘಾತಕ್ಕೊಳಗಾಗಿದ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆಸ್ಪತ್ರೆಯ ಬೆಡ್ ಮೇಲಿದ್ದ ಸಂದೀಪ ಅವರು ಚಿಕಿತ್ಸೆಗೆ ಸ್ಪಂದಿಸದೆ ಹಠಾತ್ತನೆ ಕೊನೆಯುಸಿರೆಳೆದಿದ್ದರು. ಆರಂಭದಲ್ಲಿ ಇದನ್ನು ಕೇವಲ ರಸ್ತೆ ಅಪಘಾತದಿಂದ ಸಂಭವಿಸಿದ ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ದಿನಗಳು ಉರುಳಿದಂತೆ ಸಂದೀಪ ಅವರ ಪತ್ನಿ ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕನ ನಡವಳಿಕೆಯ ಮೇಲೆ ಮೃತನ ಮನೆಯವರಿಗೆ ತೀವ್ರ ಅನುಮಾನ ಮೂಡಲಾರಂಭಿಸಿದೆ.
ಅಂತಿಮವಾಗಿ ಸಂದೀಪ ಅವರ ಸಾವಿನ ಹಿಂದೆ ಪಕ್ಕಾ ಪ್ಲಾನ್ಡ್ ಮರ್ಡರ್ ಸಂಚು ಅಡಗಿದೆ ಎಂದು ಕುಟುಂಬಸ್ಥರು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಸಂದೀಪನನ್ನು ಮುಗಿಸಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ಆರೋಪಿಗಳು, ಆಸ್ಪತ್ರೆಯಲ್ಲೇ ರಹಸ್ಯವಾಗಿ ವಿಷ ಪ್ರಾಶನ ಮಾಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸದ್ಯ ಈ ಪ್ರಕರಣದ ಆಳಕ್ಕೆ ಇಳಿದಿರುವ ಬೆಳಗಾವಿ ಉಪವಿಭಾಗಾಧಿಕಾರಿ (AC) ಶ್ರವಣಕುಮಾರ ಅವರ ಸಮ್ಮುಖದಲ್ಲಿ ಹೂತಿದ್ದ ದೇಹದ ಅವಶೇಷಗಳನ್ನು ಮರಳಿ ಸಂಗ್ರಹಿಸಿ, ವೈಜ್ಞಾನಿಕ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಈ ಲ್ಯಾಬ್ ವರದಿ ಬಂದ ಬಳಿಕವಷ್ಟೇ ನಿವೃತ್ತ ಸೈನಿಕನಿಗೆ ವಿಷ ಉಣಿಸಿ ಕೊಂದ ಪತ್ನಿಯ ಅಸಲಿ ಮುಖವಾಡ ಕಳಚಲಿದ್ದು, ಇಡೀ ಗ್ರಾಮದಲ್ಲಿ ಸದ್ಯ ಆತಂಕ ಮತ್ತು ಉದ್ವಿಗ್ನ ವಾತಾವರಣ ಮನೆಮಾಡಿದೆ.
