TOP NEWS

Kerala: ಕೇರಳದ ನಾರಿಮಣಿಯರಿಗೆ ಸಿಹಿ ಸುದ್ದಿ: ಜೂನ್ 15 ರಿಂದ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ

kerala government free bus to ladies from june 15

ತಿರುವನಂತಪುರಂ: ದಕ್ಷಿಣ ಭಾರತದ ಇತರ ರಾಜ್ಯಗಳಾದ ಕರ್ನಾಟಕ ಹಾಗೂ ತೆಲಂಗಾಣದ ಮಾದರಿಯಲ್ಲೇ ಈಗ ಕೇರಳದಲ್ಲೂ (Kerala) ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ‘ಉಚಿತ ಪ್ರಯಾಣ’ ಭಾಗ್ಯ ಲಭಿಸಿದೆ. ಯುಡಿಎಫ್ (UDF) ನೇತೃತ್ವದ ಸರ್ಕಾರವು ತನ್ನ ಪ್ರಮುಖ ಚುನಾವಣಾ ಗ್ಯಾರಂಟಿಯನ್ನು ಈಡೇರಿಸಿದ್ದು, ಜೂನ್ 15 ರಿಂದ ಅನ್ವಯವಾಗುವಂತೆ ರಾಜ್ಯದ ಮಹಿಳೆಯರಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಆರ್ಡಿನರಿ ಬಸ್‌ಗಳಲ್ಲಿ ಉಚಿತ ಸೌಲಭ್ಯ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ.

800 ಕೋಟಿ ಆರ್ಥಿಕ ಹೊರೆ

ಈ ಮಹತ್ವಾಕಾಂಕ್ಷಿ ಕಲ್ಯಾಣ ಯೋಜನೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಪ್ರತಿ ತಿಂಗಳು ಸರಿಸುಮಾರು 70 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದ್ದು, ವರ್ಷಕ್ಕೆ ಇದು ಬರೋಬ್ಬರಿ 800 ಕೋಟಿ ರೂಪಾಯಿ ವೆಚ್ಚ ತರಲಿದೆ. ಈ ಎಲ್ಲಾ ನಷ್ಟದ ಮೊತ್ತವನ್ನು ಸಾರಿಗೆ ಸಂಸ್ಥೆಗೆ ಸರ್ಕಾರವೇ ಸಬ್ಸಿಡಿ ರೂಪದಲ್ಲಿ ಭರಿಸಲಿದೆ. ಈಗಾಗಲೇ ನಷ್ಟದ ಸುಳಿಗೆ ಸಿಲುಕಿರುವ ಕೆಎಸ್‌ಆರ್‌ಟಿಸಿಗೆ ವಾರ್ಷಿಕವಾಗಿ 1,500 ಕೋಟಿ ರೂಪಾಯಿಗಳ ಅನುದಾನ ನೀಡಲಾಗುತ್ತಿದ್ದು, ಅದರ ಬೆನ್ನಲ್ಲೇ ಈ ಹೊಸ ಆರ್ಥಿಕ ಹೊರೆಯನ್ನು ಸರ್ಕಾರವೇ ಹೊತ್ತುಕೊಂಡಿದೆ. ಆದರೆ ಈ ಸೌಲಭ್ಯದಿಂದಾಗಿ ಮುಂದಿನ ಆರು ತಿಂಗಳಲ್ಲಿ ಸಾರಿಗೆ ಸಂಸ್ಥೆಗೆ ಹೆಚ್ಚಿನ ಮಹಿಳಾ ಪ್ರಯಾಣಿಕರು ಲಗ್ಗೆ ಇಡುವುದರಿಂದ ಆದಾಯ ತಾನಾಗಿಯೇ ವೃದ್ಧಿಸಲಿದೆ ಎಂಬ ಲೆಕ್ಕಾಚಾರ ಮುಖ್ಯಮಂತ್ರಿಗಳದ್ದಾಗಿದೆ.

ಪ್ರಸ್ತುತ ಆರಂಭಿಕ ಹಂತದಲ್ಲಿ ಈ ಉಚಿತ ಬಸ್ ಪ್ರಯಾಣದ ಕೊಡುಗೆಯು ಕೇವಲ ಕೆಎಸ್‌ಆರ್‌ಟಿಸಿಯ ಸಾಮಾನ್ಯ (ಆರ್ಡಿನರಿ) ಬಸ್‌ಗಳಿಗೆ ಮಾತ್ರ ಸೀಮಿತವಾಗಿರಲಿದೆ. ಯಾವುದೇ ವಯಸ್ಸಿನ ತಾರತಮ್ಯವಿಲ್ಲದೆ ಹಿರಿಯ ನಾಗರಿಕರಿಂದ ಹಿಡಿದು ಶಾಲಾ ವಿದ್ಯಾರ್ಥಿನಿಯರ ವರೆಗೂ ಎಲ್ಲಾ ಮಹಿಳೆಯರು ಈ ಸೌಲಭ್ಯವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಮಹಿಳೆಯರ ಸ್ವಾವಲಂಬನೆ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಸಾಮಾನ್ಯ ಕುಟುಂಬಗಳ ಸಾರಿಗೆ ವೆಚ್ಚವನ್ನು ತಗ್ಗಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ.

ಆದರೆ, ಸರ್ಕಾರದ ಈ ಜನಪ್ರಿಯ ಯೋಜನೆಗೆ ಕೇರಳದ ಮಲಬಾರ್ ಭಾಗದ ಜನರಿಂದ ಕೊಂಚ ಅಪಸ್ವರ ಕೇಳಿಬಂದಿದೆ. ಆ ಭಾಗಗಳಲ್ಲಿ ಸಾಮಾನ್ಯ ಬಸ್‌ಗಳಿಗಿಂತ ಹೆಚ್ಚಾಗಿ ಫಾಸ್ಟ್ ಪ್ಯಾಸೆಂಜರ್ ಮತ್ತು ಸೂಪರ್ ಫಾಸ್ಟ್ ಬಸ್‌ಗಳೇ ಓಡಾಡುವುದರಿಂದ ಅಲ್ಲಿನ ಮಹಿಳೆಯರಿಗೆ ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಈ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸತೀಶನ್, ತಳಮಟ್ಟದ ಸ್ಥಿತಿಗತಿ ಹಾಗೂ ಮಹಿಳೆಯರ ಪ್ರತಿಕ್ರಿಯೆಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಯೋಜನೆಯಲ್ಲಿ ಅಗತ್ಯ ಬದಲಾವಣೆ ತರಲಾಗುವುದು ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ಈಗಾಗಲೇ 48,000 ಕೋಟಿ ರೂಪಾಯಿಗೂ ಅಧಿಕ ಕಂದಾಯ ಬಾಕಿ ಮತ್ತು ಸಾಲದ ಸುಳಿ ಇರುವಾಗ, ಇಂತಹ ಉಚಿತ ಕೊಡುಗೆಗಳಿಂದ ಆರ್ಥಿಕ ಶಿಸ್ತು ಹದಗೆಡಬಹುದು ಎಂದು ಹಣಕಾಸು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಬಿಸಿ ಬಿಸಿ ಊಟ, ಇಂಡಕ್ಷನ್ ಸ್ಟೌವ್ ಮೂಲಕ ಅಡುಗೆ

Leave a Reply

Your email address will not be published. Required fields are marked *