TOP NEWS

Cyber Crime: ಮಕ್ಕಳ ಚೈಲ್ಡ್ ಪೋರ್ನೋಗ್ರಫಿ ವೀಕ್ಷಣೆ ಹಾಗೂ ಶೇರ್: ಕೊಪ್ಪಳದಲ್ಲಿ ಮೂವರು ಯುವಕರ ಸೈಬರ್ ಬೇಟೆ

cyber crime koppal police arrested 3 people

ಕೊಪ್ಪಳ: ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಪ್ರಾಪ್ತರ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದು, ನೋಡುವುದು ಹಾಗೂ ಹಂಚಿಕೊಳ್ಳುವ ಜಾಲದ ಮೇಲೆ ಕೊಪ್ಪಳ ಜಿಲ್ಲಾ ಸೈಬರ್ ಕ್ರೈಮ್ (Cyber Crime) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಕ್ಕಳ ಹಕ್ಕುಗಳಿಗೆ ಧಕ್ಕೆ ತರುವಂತಹ ಈ ಗಂಭೀರ ಆನ್‌ಲೈನ್ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಯುವಕರನ್ನು ಖಾಕಿ ಪಡೆ ಈಗಾಗಲೇ ಜೈಲಿಗಟ್ಟಿದ್ದು, ಈ ಜಾಲದ ಮೂಲವನ್ನು ಕೆದಕಲು ತನಿಖೆ ತೀವ್ರಗೊಳಿಸಿದೆ.

ತಂತ್ರಜ್ಞಾನದ ಜಾಲಕ್ಕೆ ಲಾಕ್ ಆದ ಕಿಡಿಗೇಡಿಗಳು

ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ‘ಕಾಣೆ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ (NCMEC) ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗಾಗಿ ‘ಸೈಬರ್ ಟಿಪ್‌ಲೈನ್’ ಎಂಬ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ. ಈ ತಾಂತ್ರಿಕ ವ್ಯವಸ್ಥೆ ನೀಡಿದ ಖಚಿತ ವರದಿಯ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸಿದಾಗ ಶಾಕಿಂಗ್ ಸತ್ಯ ಹೊರಬಿದ್ದಿದೆ. ಕೊಪ್ಪಳದ ಮೂವರು ಯುವಕರು ತಮ್ಮ ವೈಯಕ್ತಿಕ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಇಂತಹ ವಿಕೃತ ವಿಡಿಯೋಗಳನ್ನು ನೋಡಿರುವುದು ಹಾಗೂ ಬೇರೆಯವರಿಗೂ ಫಾರ್ವರ್ಡ್ ಮಾಡಿರುವುದು ಪತ್ತೆಯಾಗಿದೆ. ಬಂಧಿತರ ಪೈಕಿ ಇಬ್ಬರನ್ನು ಕಳೆದ ಆರು ತಿಂಗಳ ಅವಧಿಯಲ್ಲಿ ಹಿಡಿಯಲಾಗಿದ್ದು, ಮತ್ತೊಬ್ಬನನ್ನು 2025 ರ ಅವಧಿಯಲ್ಲಿ ಸೈಬರ್ ರೇಡಾರ್ ಮೂಲಕ ಸೆರೆಹಿಡಿಯಲಾಗಿತ್ತು.

ಸೈಬರ್ ಪೊಲೀಸರು ಕೃತ್ಯ ಪತ್ತೆ ಹಚ್ಚಿದ್ದು ಹೇಗೆ?

ಸಾಮಾಜಿಕ ಮಾಧ್ಯಮಗಳು ಹಾಗೂ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ISP) ಸಂಸ್ಥೆಗಳು ನೀಡುವ ಇಂಟರ್ನೆಟ್ ಡೇಟಾ ವರದಿಗಳನ್ನು ಸೈಬರ್ ಟಿಪ್‌ಲೈನ್‌ನ ಮಾಹಿತಿಯೊಂದಿಗೆ ಕ್ರಾಸ್ ಚೆಕ್ ಮಾಡಿದಾಗ ಆರೋಪಿಗಳ ಡಿಜಿಟಲ್ ಹೆಜ್ಜೆಗುರುತುಗಳು ಸಿಕ್ಕಿವೆ. ಅವರ ಮೊಬೈಲ್ ಸಂಖ್ಯೆ ಮತ್ತು ನಿಖರ ವಿಳಾಸ ಪತ್ತೆಯಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಕೊಪ್ಪಳ ಸೈಬರ್ ಪೊಲೀಸರು, ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಗೌಪ್ಯತೆ ಮತ್ತು ಮುನ್ನೆಚ್ಚರಿಕೆ: ಅಂತರ್ಜಾಲದಲ್ಲಿ ಮಕ್ಕಳ ಮೇಲಿನ ಇಂತಹ ಶೋಷಣೆ ಅಥವಾ ಸೈಬರ್ ಅಪರಾಧಗಳ ಕುರಿತು ಮಾಹಿತಿ ಹಂಚಿಕೊಳ್ಳಲು ಸೈಬರ್ ಟಿಪ್‌ಲೈನ್ ಅತ್ಯಂತ ಸುರಕ್ಷಿತ ವೇದಿಕೆಯಾಗಿದೆ. ಇಲ್ಲಿ ದೂರು ನೀಡುವ ಸಾರ್ವಜನಿಕರ ಹೆಸರನ್ನು ಸಂಪೂರ್ಣವಾಗಿ ಗುಪ್ತವಾಗಿಡಲಾಗುತ್ತದೆ. ಇತ್ತೀಚೆಗೆ ಸ್ಮಾರ್ಟ್‌ಫೋನ್ ಬಳಕೆ ಮಿತಿ ಮೀರುತ್ತಿರುವುದರಿಂದ, ಸೈಬರ್ ಲೋಕದ ಪ್ರತಿಯೊಂದು ಚಲನವಲನದ ಮೇಲೂ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಿದೆ.

ಖಡಕ್ ಸಂದೇಶ ನೀಡಿದ ಸೈಬರ್ ಡಿವೈಎಸ್‌ಪಿ: ಈ ಕಾರ್ಯಾಚರಣೆಯ ಬಗ್ಗೆ ಮಾತನಾಡಿರುವ ಕೊಪ್ಪಳ ಸೈಬರ್ ವಿಭಾಗದ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು, “ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಧ್ಯಮದ ಮೂಲಕ ಮಕ್ಕಳ ಅಶ್ಲೀಲ ಕಂಟೆಂಟ್‌ಗಳನ್ನು ವೀಕ್ಷಿಸುವುದು, ಗ್ಯಾಲರಿಯಲ್ಲಿ ಇಟ್ಟುಕೊಳ್ಳುವುದು ಅಥವಾ ಇತರರಿಗೆ ಶೇರ್ ಮಾಡುವುದು ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಸದ್ಯ ಸಿಕ್ಕಿಬಿದ್ದಿರುವ ಮೂವರ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ” ಎಂದು ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಡ್ವಾನ್ಸ್ ಹಣದ ಕಿರಿಕ್: ವ್ಯಕ್ತಿಯ ಭೀಕರ ಕೊ*ಲೆ, ಮೂವರು ಆರೋಪಿಗಳು ಲಾಕ್!

Leave a Reply

Your email address will not be published. Required fields are marked *