ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ (West Bengal) ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸ್ವಪನ್ ದಾಸ್‌ಗುಪ್ತಾ, ತಪಸ್ ರಾಯ್ ಮತ್ತು ಶಂಕರ್ ಘೋಷ್ ಸೇರಿದಂತೆ ಒಟ್ಟು 35 ಬಿಜೆಪಿ ಶಾಸಕರು ಸೋಮವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಹೊಸ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಮೂರು ವಾರಗಳ ನಂತರ ವಿಸ್ತರಣೆ
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ 294 ಸದಸ್ಯರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 208 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ಸಾಧಿಸಿತ್ತು. ಈ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಂಡು, ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದಾದ ಬಳಿಕ ಮೇ 9 ರಂದು 55 ವರ್ಷದ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೊಂದಿಗೆ ದಿಲೀಪ್ ಘೋಷ್, ಅಗ್ನಿಮಿತ್ರ ಪೌಲ್, ನಿಸಿತ್ ಪ್ರಮಾಣಿಕ್, ಅಶೋಕ್ ಕೀರ್ತನಿಯಾ ಮತ್ತು ಕ್ಷುದೀರಾಂ ತುಡು ಅವರು ಕೂಡ ಅಂದೇ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಮೂರು ವಾರಗಳ ನಂತರ ಈ ಸಚಿವ ಸಂಪುಟ ವಿಸ್ತರಣೆ ನಡೆದಿದೆ.
ಸಚಿವ ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಅವರು ಕಳೆದ ವಾರವಷ್ಟೇ ನವದೆಹಲಿಯಲ್ಲಿ ಪಕ್ಷದ ಕೇಂದ್ರ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇದೇ ವಾರ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿತ್ತು.
ಸದ್ಯ 35 ಹೊಸ ಶಾಸಕರ ಸೇರ್ಪಡೆಯೊಂದಿಗೆ ಸುವೇಂದು ಅಧಿಕಾರಿ ಸರ್ಕಾರದ ಒಟ್ಟು ಸಚಿವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. 294 ಸದಸ್ಯರ ಬಲವಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ನಿಯಮಗಳ ಪ್ರಕಾರ ಸರ್ಕಾರ ಹೊಂದಬಹುದಾದ ಗರಿಷ್ಠ ಸಚಿವರ ಸಂಖ್ಯೆಗಿಂತ ಇದು ಕೇವಲ ಮೂರು ಸ್ಥಾನಗಳಷ್ಟೇ ಕಡಿಮೆಯಾಗಿದೆ.
ಇಂದಿನ ಸಂಪುಟ ವಿಸ್ತರಣೆಯಲ್ಲಿ ಸ್ವಪನ್ ದಾಸ್‌ಗುಪ್ತಾ, ದೂಧ್ ಕುಮಾರ್ ಮೊಂಡಲ್, ದೀಪಕ್ ಬರ್ಮನ್, ಮನೋಜ್ ಒರಾನ್, ಗೌರಿ ಶಂಕರ್ ಘೋಷ್, ಅರ್ಜುನ್ ಸಿಂಗ್, ತಪಸ್ ರಾಯ್, ಶರದ್ವತ್ ಮುಖರ್ಜಿ, ಜಗನ್ನಾಥ್ ಚಟ್ಟೋಪಾಧ್ಯಾಯ ಮತ್ತು ಶಂಕರ್ ಘೋಷ್ ಅವರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಾಸಕರಾದ ರಾಜೇಶ್ ಮಹಾತ, ಇಂದ್ರನೀಲ್ ಖಾನ್ ಮತ್ತು ಮಾಲತಿ ರಾವಾ ರಾಯ್ ಅವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉಳಿದಂತೆ ಶಾಂತನು ಪ್ರಮಾಣಿಕ್, ಪೂರ್ಣಿಮಾ ಚಕ್ರವರ್ತಿ, ಉಮೇಶ್ ರಾಯ್, ಜೋಯೆಲ್ ಮುರ್ಮು, ಅಶೋಕ್ ದಿಂಡಾ, ಆನಂದಮೋಯ್ ಬರ್ಮನ್, ಕೌಶಿಕ್ ಚೌಧರಿ, ಗಾರ್ಗಿ ದಾಸ್ ಘೋಷ್, ಭಾಸ್ಕರ್ ಭಟ್ಟಾಚಾರ್ಯ, ದಿಬಾಕರ್ ಘರಾಮಿ ಮತ್ತು ಸುಮನ ಸರ್ಕಾರ್ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸುವೇಂದು ಸರ್ಕಾರದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಸಿಬಿಎಸ್‌ಇ ಆನ್-ಸ್ಕ್ರೀನ್ ಮೌಲ್ಯಮಾಪನ ಗೊಂದಲ: ತಾಂತ್ರಿಕ ದೋಷ ನಿವಾರಣೆಗೆ ಐಐಟಿ ತಜ್ಞರ ನೆರವು
