ನವದೆಹಲಿ: ಸಿಬಿಎಸ್‌ಇ (CBSE) ಜಾರಿಗೆ ತಂದಿರುವ ಹೊಸ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಡಿಜಿಟಲ್ ಮೌಲ್ಯಮಾಪನ ಪದ್ಧತಿಯ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೊನೆಗೂ ಈ ವಿವಾದದ ಕುರಿತು ಮೌನ ಮುರಿದಿದ್ದಾರೆ. ಈ ಇಡೀ ಗೊಂದಲದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿರುವ ಅವರು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಲೋಪದೋಷಗಳು ಕಂಡುಬಂದಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಭರವಸೆ ನೀಡಿದ್ದಾರೆ. ನವದೆಹಲಿಯಲ್ಲಿ ಸಿಬಿಎಸ್‌ಇ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಈ ಸಮಸ್ಯೆಯನ್ನು ಖಂಡಿತವಾಗಿಯೂ ಸರಿಪಡಿಸಲಾಗುವುದು ಮತ್ತು ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದೂರು ದಾಖಲಿಸಿದ ವಿದ್ಯಾರ್ಥಿಗಳು
ಕಳೆದ ಕೆಲವು ದಿನಗಳಿಂದ ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳು ಮಸುಕಾಗಿ ಕಾಣಿಸುತ್ತಿವೆ, ಕೆಲವು ಉತ್ತರಗಳನ್ನು ಪರಿಶೀಲಿಸದೆ ಬಿಡಲಾಗಿದೆ, ವೆಬ್ ಪೋರ್ಟಲ್ ಕ್ರ್ಯಾಶ್ ಆಗುತ್ತಿದೆ ಮತ್ತು ಹಣ ಪಾವತಿಯಲ್ಲಿ ತೊಂದರೆಯಾಗುತ್ತಿದೆ ಎಂದು ಸಾವಿರಾರು ವಿದ್ಯಾರ್ಥಿಗಳು ಗಂಭೀರ ದೂರುಗಳನ್ನು ದಾಖಲಿಸಿದ್ದರು. ಈ ದೂರುಗಳಿಂದಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ತೀವ್ರ ಮಾನಸಿಕ ಒತ್ತಡವನ್ನು ಒಪ್ಪಿಕೊಂಡ ಶಿಕ್ಷಣ ಸಚಿವರು, ಇದೇ ವೇಳೆ ಮಂಡಳಿಯ ಹೊಸ ಡಿಜಿಟಲ್ ಮೌಲ್ಯಮಾಪನ ಮಾದರಿಯನ್ನು ಸಮರ್ಥಿಸಿಕೊಂಡರು. ಈ ಬಾರಿ ಪರೀಕ್ಷೆ ಬರೆದ 17 ಲಕ್ಷ ವಿದ್ಯಾರ್ಥಿಗಳ ಒಟ್ಟು ೯೮ ಲಕ್ಷ ಉತ್ತರ ಪತ್ರಿಕೆಗಳ ಪ್ರತಿಯನ್ನು ಅತ್ಯಂತ ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ಪ್ರತಿಯೊಂದು ಉತ್ತರ ಪತ್ರಿಕೆಯು ಸುಮಾರು 40 ಪುಟಗಳನ್ನು ಹೊಂದಿದ್ದು, ಅದರಂತೆ ಒಟ್ಟು 40 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ ಎಂದು ಅವರು ವಿವರಿಸಿದರು. ಈ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ ಈಗಾಗಲೇ ಬಳಕೆಯಲ್ಲಿರುವ ಒಂದು ಪ್ರಗತಿಪರ ಸಾಧನವಾಗಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳ ಬಗ್ಗೆ ಪಾರದರ್ಶಕ ಮಾಹಿತಿ ಸಿಗಲಿ ಎಂಬ ಉದ್ದೇಶದಿಂದಲೇ ಇದನ್ನು ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನೊಂದೆಡೆ, ಸಿಬಿಎಸ್‌ಇ ಫಲಿತಾಂಶದ ನಂತರ ಉಂಟಾಗಿರುವ ಈ ಗೊಂದಲವು ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಬಗ್ಗೆ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಅವರ ಟೀಕೆಗೆ ತಿರುಗೇಟು ನೀಡಿದ ಧರ್ಮೇಂದ್ರ ಪ್ರಧಾನ್, ಸಿಬಿಎಸ್‌ಇ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಮತ್ತು ಇಡೀ ಪ್ರಕ್ರಿಯೆಯು ಸರ್ಕಾರದ ನಿಯಮಾವಳಿಗಳ ಪ್ರಕಾರವೇ ನಡೆದಿದೆ ಎಂದು ಹೇಳಿದರು. ರಾಜಕೀಯವನ್ನು ಆಮೇಲೆಯೂ ಮಾಡಬಹುದು, ಆದರೆ ಈ ಹೊತ್ತಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸದ ಬೌದ್ಧಿಕ ನಡೆ ಅಗತ್ಯ ಎಂದು ಹೇಳಿದ ಸಚಿವರು, ಡಿಜಿಟಲ್ ಇಂಡಿಯಾ ಮತ್ತು ವೈಜ್ಞಾನಿಕ ಪ್ರಗತಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ರಾಹುಲ್ ಗಾಂಧಿ ಅವರು ಪದೇ ಪದೇ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಂಕಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನದ ಬಗ್ಗೆ ಈಗಾಗಲೇ ಆತಂಕದಲ್ಲಿರುವ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸುವಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ಅವರು ರಾಜಕೀಯ ನಾಯಕರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದಾಗ ಪುಟಗಳು ಸರಿಯಾಗಿ ಕಾಣಿಸದೇ ಇರುವುದು, ತಪ್ಪು ಅಂಕಗಳನ್ನು ನೀಡಿರುವುದು ಹಾಗೂ ವೆಬ್‌ಸೈಟ್ ತಾಂತ್ರಿಕ ದೋಷಗಳಿಂದಾಗಿ ಹಣ ಪಾವತಿ ವಿಫಲವಾಗುತ್ತಿರುವುದು ಪತ್ತೆಯಾದಾಗ ಈ ವಿವಾದ ದೊಡ್ಡದಾಗಿತ್ತು. ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿರುವ ಸಿಬಿಎಸ್‌ಇ, ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿದೆ ಮತ್ತು ವಿದ್ಯಾರ್ಥಿಗಳ ಎಲ್ಲಾ ನಿಜವಾದ ದೂರುಗಳನ್ನು ವಿಷಯ ತಜ್ಞರ ಮೂಲಕ ಮರುಪರಿಶೀಲಿಸುವುದಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಸಿಬಿಎಸ್‌ಇ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿವಾದವಾಗಿ ಮಾರ್ಪಟ್ಟಿರುವ ಈ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯು, ದೇಶದ ಉನ್ನತ ಪರೀಕ್ಷಾ ಮಂಡಳಿಗಳ ಡಿಜಿಟಲ್ ಮೂಲಸೌಕರ್ಯ, ಪಾರದರ್ಶಕತೆ ಮತ್ತು ವಿದ್ಯಾರ್ಥಿಗಳ ನಂಬಿಕೆಯ ಸುತ್ತ ದೊಡ್ಡ ಪ್ರಶ್ನೆಗಳನ್ನು ಮೂಡಿಸಿದೆ.
