ನವದೆಹಲಿ: ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು (BJP) ಸಾಂಸ್ಥಿಕ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ದೆಹಲಿ, ಪಂಜಾಬ್, ಹರಿಯಾಣ ಮತ್ತು ತ್ರಿಪುರಾ ಸೇರಿದಂತೆ ನಾಲ್ಕು ರಾಜ್ಯಗಳ ತನ್ನ ಪಕ್ಷದ ಘಟಕಗಳಿಗೆ ನೂತನ ಅಧ್ಯಕ್ಷರನ್ನು ಘೋಷಿಸಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಪರವಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈ ನೇಮಕಾತಿ ಆದೇಶಗಳನ್ನು ಹೊರಡಿಸಿದ್ದಾರೆ. ನೂತನ ಬದಲಾವಣೆಯ ಅನ್ವಯ ದೆಹಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ, ಪಂಜಾಬ್ ಅಧ್ಯಕ್ಷರಾಗಿ ಮಾಜಿ ಶಾಸಕ ಕೇವಲ ಸಿಂಗ್ ಧಿಲ್ಲೋನ್, ಹರಿಯಾಣದ ಸಾರಥಿಯಾಗಿ ಅರ್ಚನಾ ಗುಪ್ತಾ ಹಾಗೂ ತ್ರಿಪುರಾ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿ ಅಭಿಷೇಕ್ ದೆಬ್ರಾಯ್ ಅವರನ್ನು ನೇಮಕ ಮಾಡಲಾಗಿದೆ.
ಯಾರೆಲ್ಲಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ?
ಈ ಹೊಸ ನೇಮಕಾತಿಗಳ ಮೂಲಕ ಹಳೆಯ ಅಧ್ಯಕ್ಷರನ್ನು ಬದಲಾಯಿಸಲಾಗಿದ್ದು, ದೆಹಲಿಯಲ್ಲಿ ವೀರೇಂದ್ರ ಸಚದೇವ ಅವರ ಜಾಗಕ್ಕೆ ಹರ್ಷ ಮಲ್ಹೋತ್ರಾ ಬಂದಿದ್ದಾರೆ. ಪಂಜಾಬ್‌ನಲ್ಲಿ ಸುನಿಲ್ ಜಾಖರ್ ಅವರ ಬದಲಿಗೆ ಕೇವಲ ಸಿಂಗ್ ಧಿಲ್ಲೋನ್ ಅವರನ್ನು ತರಲಾಗಿದ್ದರೆ, ಹರಿಯಾಣದಲ್ಲಿ ಮೋಹನ್ ಲಾಲ್ ಬಡೋಲಿ ಅವರ ಸ್ಥಾನವನ್ನು ಅರ್ಚನಾ ಗುಪ್ತಾ ತುಂಬಿದ್ದಾರೆ. ಹಾಗೆಯೇ ತ್ರಿಪುರಾದಲ್ಲಿ ರಾಜೀಬ್ ಭಟ್ಟಾಚಾರ್ಯ ಅವರ ಜಾಗಕ್ಕೆ ಅಭಿಷೇಕ್ ದೆಬ್ರಾಯ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆರಿಸಲಾಗಿದೆ.
ಪಂಜಾಬ್ ರಾಜಕಾರಣದಲ್ಲಿ ದೀರ್ಘಕಾಲದಿಂದ ಸಕ್ರಿಯರಾಗಿರುವ ಕೇವಲ ಸಿಂಗ್ ಧಿಲ್ಲೋನ್ ಅವರು ಬರ್ನಾಲಾ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅವರು 2007 ರಿಂದ 20017 ರವರೆಗೆ ಶಾಸಕರಾಗಿದ್ದರು. ಬಳಿಕ 2022 ರಲ್ಲಿ ಬಿಜೆಪಿ ಸೇರಿದ್ದ ಧಿಲ್ಲೋನ್ ಅವರನ್ನು ಮುಂಬರುವ 2027 ರ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಪ್ರಬಲ ಸಿಖ್ ಮುಖವನ್ನು ಮುಂಚೂಣಿಗೆ ತರುವ ತಂತ್ರಗಾರಿಕೆಯ ಭಾಗವಾಗಿ ಬಿಜೆಪಿ ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ನೀಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಧಿಲ್ಲೋನ್, ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಮತ್ತು 2027 ರಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಗೂಂಡಾರಾಜ್ ಕೊನೆಗಾಣಿಸಿ ಕಮಲರಳಿಸುವುದಾಗಿ ಸಂಕಲ್ಪ ತೊಟ್ಟಿದ್ದಾರೆ. ಇದೇ ವೇಳೆ ನಿರ್ಗಮಿತ ಅಧ್ಯಕ್ಷ ಸುನಿಲ್ ಜಾಖರ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ತಮ್ಮ ಅವಧಿಯ ಮಾರ್ಗದರ್ಶನಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.
ಇನ್ನು ದೆಹಲಿ ಬಿಜೆಪಿಯ ಹೊಸ ಸಾರಥಿಯಾಗಿರುವ ಹರ್ಷ ಮಲ್ಹೋತ್ರಾ ಅವರು ಸಂಘಟನಾತ್ಮಕ ಚತುರತೆಗೆ ಹೆಸರಾದವರು. ಪ್ರಸ್ತುತ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳು ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿರುವ ಇವರು, ಪೂರ್ವ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ನಿವೃತ್ತಿಯಿಂದ ತೆರವಾದ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಹೋತ್ರಾ, ಭಾರಿ ಅಂತರದಿಂದ ಜಯಗಳಿಸಿದ್ದರು. ಇದಕ್ಕೂ ಮುನ್ನ ದೆಹಲಿ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿ, ಶಿಕ್ಷಣ ಸಮಿತಿ ಅಧ್ಯಕ್ಷರಾಗಿ ಹಾಗೂ ಪೂರ್ವ ದೆಹಲಿ ಪಾಲಿಕೆಯ ಮೇಯರ್ ಆಗಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸಿದ ಅನುಭವ ಅವರಿಗಿದೆ.
ಇನ್ನುಳಿದಂತೆ ಹರಿಯಾಣದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಾಣಿಪತ್ ಮೂಲದ ಅರ್ಚನಾ ಗುಪ್ತಾ ಅವರು ಈ ಹಿಂದೆ ಹರಿಯಾಣ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ತ್ರಿಪುರಾದ ಹೊಸ ಅಧ್ಯಕ್ಷರಾಗಿರುವ ಅಭಿಷೇಕ್ ದೆಬ್ರಾಯ್ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಹೈಪ್ರೊಫೈಲ್ ಉನ್ನತ ಕ್ಷೇತ್ರವಾದ ಮಾತರ್ಬಾರಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪಕ್ಷದಲ್ಲಿ ತಮ್ಮ ಪ್ರಭಾವವನ್ನು ಸಾಬೀತುಪಡಿಸಿದ್ದರು. ಈ ನಾಲ್ಕೂ ರಾಜ್ಯಗಳ ಸಾಂಸ್ಥಿಕ ಪುನರ್ರಚನೆಯು ಬಿಜೆಪಿಗೆ ಮುಂಬರುವ ದಿನಗಳಲ್ಲಿ ಹೊಸ ರಾಜಕೀಯ ದಿಕ್ಸೂಚಿಯನ್ನು ನೀಡುವ ನಿರೀಕ್ಷೆಯಿದೆ.
