TOP NEWS

Pahalgam Attack: ಪಹಲ್ಗಾಮ್ ಭೀಕರ ಉಗ್ರರ ದಾಳಿ ಸಂಪೂರ್ಣ ಪಾಕಿಸ್ತಾನದಿಂದಲೇ ನಿಯಂತ್ರಣ: ಎನ್‌ಐಎ ತನಿಖೆಯಲ್ಲಿ ‘ಫಾಲ್ಸ್ ಫ್ಲ್ಯಾಗ್’ ಹಸಿ ಸುಳ್ಳು ಬಯಲು!

NIA Chargesheet regarding Pahalgam Attack

ನವದೆಹಲಿ: ಕಳೆದ 2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶ್ವವಿಖ್ಯಾತ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ(Pahalgam Attack) 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದ ಭೀಕರ ಭಯೋತ್ಪಾದನಾ ದಾಳಿಯು ಸಂಪೂರ್ಣವಾಗಿ ಪಾಕಿಸ್ತಾನದಿಂದಲೇ ಸಂಚು ರೂಪಿಸಿ ನಿಯಂತ್ರಿಸಲ್ಪಟ್ಟಿತ್ತು ಎಂಬುದನ್ನು ದೇಶದ ಉನ್ನತ ತನಿಖಾ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ದಳ (NIA) ಸಲ್ಲಿಸಿರುವ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಈ ಭೀಕರ ನರಮೇಧದ ಸಂಪೂರ್ಣ ಪ್ಲಾನಿಂಗ್ ಪಾಕಿಸ್ತಾನದಲ್ಲೇ ನಡೆದಿತ್ತು ಹಾಗೂ ಜಾಗತಿಕ ಮಟ್ಟದ ಆಕ್ರೋಶದಿಂದ ಬದಲಿ ಹಾದಿ ಹಿಡಿಯಲು ಭಾರತವೇ ಈ ದಾಳಿ ನಡೆಸಿದೆ ಎಂಬ ‘ಫಾಲ್ಸ್ ಫ್ಲ್ಯಾಗ್ ಆಪರೇಷನ್’ ಎಂಬ ಸುಳ್ಳು ಕಥೆಯನ್ನು ಉಗ್ರರು ಸೃಷ್ಟಿಸಿದ್ದರು ಎಂಬುದು ಗಟ್ಟಿ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಪಾಕ್‌ ಸುಳ್ಳಿನ ಮುಖವಾಡ ಬಯಲು

ಪಾಕಿಸ್ತಾನದ ಲಾಹೋರ್‌ನಲ್ಲಿ ಅಡಗ ಕುಳಿತಿರುವ ಲಷ್ಕರ್-ಎ-ತೈಬಾ (LeT) ಹಾಗೂ ಅದರ ಪ್ರತ್ಯಕ್ಷ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಕಮಾಂಡರ್, ಭಾರತದ ಅತ್ಯಂತ ವಾಂಟೆಡ್ ಉಗ್ರನಾಗಿರುವ ಸೈಫುಲ್ಲಾ ಅಲಿಯಾಸ್ ಸಾಜಿದ್ ಜತ್ ಅಲಿಯಾಸ್ ‘ಲಂಗ್ಡಾ’ ಎಂಬಾತನೇ ಪಹಲ್ಗಾಮ್‌ನಲ್ಲಿದ್ದ ಉಗ್ರರಿಗೆ ನೇರ ಸೂಚನೆಗಳನ್ನು ನೀಡುತ್ತಿದ್ದನು. ದಾಳಿ ನಡೆದ ತಕ್ಷಣವೇ ಟಿಆರ್‌ಎಫ್ ಸಂಘಟನೆಯು ‘ಕಾಶ್ಮೀರ್ ಫೈಟ್’ ಎಂಬ ಟೆಲಿಗ್ರಾಂ ಚಾನೆಲ್ ಮೂಲಕ ಹೊಣೆ ಹೊತ್ತುಕೊಂಡಿತ್ತು. ಆದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಹೆದರಿದ ಉಗ್ರರು, ತಮ್ಮ ಟೆಲಿಗ್ರಾಂ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಮತ್ತು ಈ ದಾಳಿಗೂ ತಮಗೂ ಸಂಬಂಧವಿಲ್ಲ ಎಂದು ನಾಟಕವಾಡಿದ್ದರು. ಆದರೆ, ಎನ್‌ಐಎ ನಡೆಸಿದ ತಾಂತ್ರಿಕ ತನಿಖೆಯಲ್ಲಿ ‘ಕಾಶ್ಮೀರ್ ಫೈಟ್’ ಟೆಲಿಗ್ರಾಂ ಚಾನೆಲ್ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಟ್ಟಗ್ರಾಮ್ ಪ್ರದೇಶದಿಂದ ಮತ್ತು ಮತ್ತೊಂದು ಮುಖ್ಯ ಖಾತೆ ರಾವಲಪಿಂಡಿಯಿಂದ ಚಾಲನೆ ಆಗುತ್ತಿರುವುದು ಪತ್ತೆಯಾಗುವ ಮೂಲಕ ಪಾಕ್ ಸೃಷ್ಟಿಸಿದ ಸುಳ್ಳಿನ ಜಾಲ ಜಗತ್ತಿನ ಎದುರು ಮುಖವಾಡ ಕಳಚಿಕೊಂಡಿದೆ.

ಭಾರತೀಯ ಸೇನೆಯ ‘ಆಪರೇಷನ್ ಮಹಾದೇವ್’ ಎನ್‌ಕೌಂಟರ್‌ನಲ್ಲಿ ಹತರಾದ ಉಗ್ರರಿಂದ ವಶಪಡಿಸಿಕೊಳ್ಳಲಾದ ಎರಡು ಮೊಬೈಲ್ ಫೋನ್‌ಗಳು ಪಾಕಿಸ್ತಾನದಲ್ಲೇ ಖರೀದಿಸಲ್ಪಟ್ಟಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದರಲ್ಲಿ ಒಂದು ಫೋನನ್ನು ಲಾಹೋರ್‌ನ ಕೈಗಾರಿಕಾ ಪ್ರದೇಶದ ವಿಳಾಸಕ್ಕೆ ಆನ್‌ಲೈನ್ ಮೂಲಕ ತರಿಸಿಕೊಳ್ಳಲಾಗಿದ್ದರೆ, ಮತ್ತೊಂದನ್ನು ಕರಾಚಿಯ ಮಾರುಕಟ್ಟೆಯಲ್ಲಿ ಖರೀದಿಸಲಾಗಿತ್ತು. ದಾಳಿಗೂ ಮುನ್ನ ಏಪ್ರಿಲ್ 15 ಮತ್ತು 16 ರಂದು ಪಾಕಿಸ್ತಾನದಿಂದಲೇ ಆದೇಶ ನೀಡಿದ್ದ ಸೈಫುಲ್ಲಾ, ತನ್ನ ಮೂವರು ಪ್ರಮುಖ ಉಗ್ರರಾದ ಫೈಸಲ್ ಜತ್, ಹಬೀಬ್ ತಾಹಿರ್ ಮತ್ತು ಹಮ್ಜಾ ಆಫ್ಘಾನಿ ಎಂಬುವವರನ್ನು ಬೈಸರನ್ ಕಣಿವೆಗೆ ಕಳುಹಿಸಿ ಅಲ್ಲಿನ ಭದ್ರತಾ ವ್ಯವಸ್ಥೆ ಹಾಗೂ ಪ್ರವಾಸಿಗರ ಓಡಾಟದ ಬಗ್ಗೆ ರೆಕ್ಕಿ (ಪರಿಶೀಲನೆ) ನಡೆಸಿದ್ದನು. ದಾಳಿಯ ದಿನದಂದು ಲಾಹೋರ್‌ನಿಂದ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಆತ, ಜಿಪಿಎಸ್ ಸಂಕೋಲೆಗಳು ಹಾಗೂ ಲೊಕೇಶನ್ ದತ್ತಾಂಶಗಳನ್ನು ರಿಯಲ್ ಟೈಮ್‌ನಲ್ಲಿ ಒದಗಿಸುತ್ತಾ, ಉಗ್ರರ ಅಡಗುತಾಣ ಮತ್ತು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ತಾನೇ ನಿರ್ದೇಶಿಸುತ್ತಿದ್ದನು. ಇದಕ್ಕೆ ಪರ್ವೇಜ್ ಮತ್ತು ಬಶೀರ್ ಅಹ್ಮದ್ ಎಂಬ ಇಬ್ಬರು ಸ್ಥಳೀಯ ದೇಶದ್ರೋಹಿಗಳು ಸಾಥ್ ನೀಡಿದ್ದರು.

ಈ ಭೀಕರ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಹಾಗೂ ಮಿಲಿಟರಿ ಮೂಲಸೌಕರ್ಯಗಳನ್ನು ಧೂಳಿಪಟ ಮಾಡಲು ನಿರ್ಣಾಯಕ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಭಾರತೀಯ ವಾಯುಪಡೆಯು ಅತ್ಯಾಧುನಿಕ ಗ್ಲೈಡ್ ಬಾಂಬ್‌ಗಳು, ಡ್ರೋನ್‌ಗಳು ಮತ್ತು ಕ್ರೂಸ್ ಮಿಸೈಲ್‌ಗಳ ಮೂಲಕ ಲಷ್ಕರ್ ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿತ್ತು. ಇದರೊಂದಿಗೆ ಭಾರತವು ತನ್ನ ಹೆಮ್ಮೆಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ ಭೀಕರ ದಾಳಿಯ ಮೂಲಕ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್) ಹಾಗೂ ಪ್ರಮುಖ ಸೇನಾ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ತಕ್ಕ ಪಾಠ ಕಲಿಸಿತ್ತು ಎಂಬ ಸಂಗತಿಯನ್ನು ಎನ್‌ಐಎ ವರದಿ ನೆನಪಿಸಿದೆ.

ಇದನ್ನೂ ಓದಿ: ಸಿಂಧೂ ನದಿ ಒಪ್ಪಂದ ಅಮಾನತು ನಡುವೆಯೂ ಮಾನವೀಯತೆ ಮೆರೆದ ಭಾರತ

Leave a Reply

Your email address will not be published. Required fields are marked *