ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಮಹತ್ವದ ಬದಲಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಗಮನ ಹಾಗೂ ಡಿ.ಕೆ. ಶಿವಕುಮಾರ್ ಅವರ ನೂತನ ನಾಯಕತ್ವದ ಹಾದಿ ಸುಗಮಗೊಳ್ಳುತ್ತಿದ್ದಂತೆ, ಹೊಸದಾಗಿ ರಚನೆಯಾಗಲಿರುವ ಸಚಿವ ಸಂಪುಟದ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಗಂಭೀರ ಕಸರತ್ತು ನಡೆಸಿದೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ನೂತನ ಶಿವಕುಮಾರ್ (DK Shivakumar)ಸರ್ಕಾರದ ಸಂಪುಟ ರಚನೆಗೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳು ಹಾಗೂ ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದ್ದು, ಇದು ಕೈ ಪಾಳಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ರಾಹುಲ್ ಗಾಂಧಿ ಅವರ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ಹಾಗೂ ರಾಜ್ಯದಲ್ಲಿ ಯಾವುದೇ ನಿರ್ದಿಷ್ಟ ಬಣಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ ಎಂಬ ಭಾವನೆ ಬಾರದಂತೆ ರಾಜಕೀಯ ಸಮತೋಲನ ಕಾಯ್ದುಕೊಳ್ಳುವುದು ಈ ಸೂತ್ರದ ಮುಖ್ಯ ಉದ್ದೇಶವಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಮುಂದಿದೆ ದೊಡ್ಡ ಸವಾಲು
ಕಾಂಗ್ರೆಸ್ ಪಕ್ಷದ ಪ್ರಮುಖ ಒಬಿಸಿ ಮುಖಂಡರಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿರುವುದರಿಂದ, ಅವರ ಬೆನ್ನಿಗಿರುವ ಅಹಿಂದ (ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು) ಮತಬ್ಯಾಂಕ್ ಕಾಂಗ್ರೆಸ್ ಕೈತಪ್ಪದಂತೆ ನೋಡಿಕೊಳ್ಳುವುದು ಹೈಕಮಾಂಡ್‌ಗೆ ಸದ್ಯಕ್ಕೆ ಎದುರಾಗಿರುವ ಅತಿ ದೊಡ್ಡ ಸವಾಲಾಗಿದೆ. ಈ ನಷ್ಟವನ್ನು ಸರಿದೂಗಿಸಲು ಡಿ.ಕೆ. ಶಿವಕುಮಾರ್ ಅವರ ಹೊಸ ಸಂಪುಟದಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪ್ರಭಾವಿ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ. ಇದರೊಂದಿಗೆ ೨೦೨೮ರ ಮುಂದಿನ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಮತದಾರರನ್ನು ಆಕರ್ಷಿಸಲು ಸಚಿವ ಸಂಪುಟದಲ್ಲಿ ಭಾರಿ ದೊಡ್ಡ ಸರ್ಜರಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ನೆರೆಯ ಕೇರಳ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಹಿನ್ನೆಲೆಯುಳ್ಳ ಯುವ ನಾಯಕರಿಗೆ ಸಚಿವ ಸ್ಥಾನ ನೀಡಿದ ಮಾದರಿಯನ್ನೇ ಕರ್ನಾಟಕದಲ್ಲೂ ಅನುಸರಿಸಲು ರಾಹುಲ್ ಗಾಂಧಿ ಒಲವು ತೋರಿದ್ದಾರೆ. ಪ್ರಸ್ತುತ ಇರುವ ೩೫ ಸಚಿವರ ಪೈಕಿ ಸುಮಾರು ೨೫ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಅವರಿಗೆ ಪಕ್ಷದ ಸಾಂಘಿಕ ಜವಾಬ್ದಾರಿ ನೀಡಲು ನಿರ್ಣಯಿಸಲಾಗಿದ್ದು, ಅವರ ಜಾಗಕ್ಕೆ ಹೊಸ ಯುವ ಮುಖಗಳನ್ನು ಕರೆತರಲು ಹೈಕಮಾಂಡ್ ಸಜ್ಜಾಗಿದೆ.
ಇನ್ನು ಹೊಸ ಸರ್ಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಪ್ರಸ್ತಾಪವನ್ನು ಹೈಕಮಾಂಡ್ ಮುಂದಿಟ್ಟಿದ್ದು, ಇವರಲ್ಲಿ ಒಬ್ಬರನ್ನು ಕಡ್ಡಾಯವಾಗಿ ದಲಿತ ಸಮುದಾಯದ ನಾಯಕನಿಗೆ ನೀಡಲು ನಿರ್ಧರಿಸಲಾಗಿದೆ. ಸಿದ್ದರಾಮಯ್ಯ-ಡಿಕೆಶಿ ನಡುವಿನ ಸಂಘರ್ಷದ ವೇಳೆ ತಾವೂ ಸಿಎಂ ರೇಸ್‌ನಲ್ಲಿರುವುದಾಗಿ ಪ್ರಕಟಿಸಿದ್ದ ಹಾಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ಡಿಸಿಎಂ ಹುದ್ದೆಗೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಮೂಲಕ ದಲಿತ ಸಮುದಾಯಕ್ಕೆ ಒಳಗೊಳ್ಳುವಿಕೆಯ ಸಂದೇಶ ರವಾನಿಸುವುದು ಕಾಂಗ್ರೆಸ್ ತಂತ್ರವಾಗಿದೆ. ಆದರೆ, ಈ ಇಬ್ಬರು ಉಪಮುಖ್ಯಮಂತ್ರಿಗಳ ಸೂತ್ರವು ಡಿ.ಕೆ. ಶಿವಕುಮಾರ್ ಬಣಕ್ಕೆ ನುಂಗಲಾರದ ತುತ್ತಾಗಿದೆ. ಡಿ.ಕೆ. ಶಿವಕುಮಾರ್ ಬಣವು ತಮ್ಮ ಅಡಿಯಲ್ಲಿ ಕೇವಲ ಒಬ್ಬರೇ ಉಪಮುಖ್ಯಮಂತ್ರಿ ಇರಬೇಕು ಎಂದು ಪಟ್ಟು ಹಿಡಿದಿದ್ದರೆ, ಇತ್ತ ಸಿದ್ದರಾಮಯ್ಯ ಬಣವು ಡಿ.ಕೆ. ಶಿವಕುಮಾರ್ ಅವರ ಹಿಡಿತವನ್ನು ಕಡಿಮೆ ಮಾಡಲು ಒಂದಕ್ಕಿಂತ ಹೆಚ್ಚು (ಮೂವರು ಅಥವಾ ಇಬ್ಬರು) ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕು ಎಂದು ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರುತ್ತಿದೆ.
ತಿಂಗಳುಗಳಿಂದ ನಡೆದ ರಾಜಕೀಯ ಜಟಾವಟಿಗೆ ದೆಹಲಿಯ ಸಭೆಯಲ್ಲಿ ತೆರೆಬಿದ್ದಿದ್ದು, ಸಿದ್ದರಾಮಯ್ಯ ಅವರನ್ನು ಗೌರವಯುತವಾಗಿ ಒಪ್ಪಿಸಿ ಸ್ಥಾನ ತ್ಯಾಗ ಮಾಡುವಂತೆ ಮಾಡುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಜೂನ್ ೧೮ ರಂದು ನಡೆಯಲಿರುವ ಮೇಲ್ಮನೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಕಳುಹಿಸಿಕೊಡುವುದು ಬಹುತೇಕ ಖಚಿತವಾಗಿದೆ. ಒಟ್ಟಾರೆ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಡಿ.ಕೆ. ಶಿವಕುಮಾರ್ ಸರ್ಕಾರವು ಯಾವುದೇ ಒಂದು ಬಣದ ಪರವಾಗಿರದೆ, ಸಂಪೂರ್ಣ ಸಮತೋಲನದಿಂದ ಕೂಡಿರಬೇಕು ಎಂಬುದು ರಾಹುಲ್ ಗಾಂಧಿ ಅವರ ಖಡಕ್ ಸಂದೇಶವಾಗಿದೆ.
