ನವದೆಹಲಿ: ದಿನೇ ದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಂದ ಕಂಗಾಲಾಗಿರುವ ಜನಸಾಮಾನ್ಯರ ತಿಂಗಳ ಬಜೆಟ್ ಮೇಲಿನ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು (Good News) ಮಹತ್ವದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ನಿರಂತರ ಇಂಧನ ಬೆಲೆ ಏರಿಕೆಯ ಮಧ್ಯೆಯೇ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (ಇ-ಸ್ಕೂಟರ್ ಮತ್ತು ಬೈಕ್) ಬಳಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ‘ಪ್ರಧಾನ ಮಂತ್ರಿ ಇ-ಡ್ರೈವ್’ ಯೋಜನೆಯಡಿ ಮರು ಸಬ್ಸಿಡಿ ನೀಡುವ ಕುರಿತು ಸರ್ಕಾರ ಉನ್ನತ ಮಟ್ಟದ ಚರ್ಚೆ ನಡೆಸುತ್ತಿದೆ. ಇದರಿಂದ ಪರಿಸರಸ್ನೇಹಿ ವಾಹನಗಳನ್ನು ಖರೀದಿಸಲು ಯೋಜಿಸುತ್ತಿರುವ ಮಧ್ಯಮ ವರ್ಗದ ಜನರಿಗೆ ದೊಡ್ಡ ಆರ್ಥಿಕ ನೆರವು ಸಿಗುವ ಸಾಧ್ಯತೆಯಿದೆ.
ಎಲೆಕ್ಟ್ರಿಕ್ ವಾಹನ ವಲಯಕ್ಕೆ ಹೆಚ್ಚಿನ ಆರ್ಥಿಕ ಉತ್ತೇಜನ ನೀಡಲು ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯವು ಹೊಸ ರೂಪುರೇಷೆ ಸಿದ್ಧಪಡಿಸುತ್ತಿದೆ. ಈ ಹಿಂದೆ ಪಿಎಂ ಇ-ಡ್ರೈವ್ ಕಾರ್ಯಕ್ರಮದ ಅಡಿಯಲ್ಲಿ ಮಾರ್ಚ್ 31, 2026 ರವರೆಗೆ ೧,೭೭೨ ಕೋಟಿ ರೂಪಾಯಿಗಳ ಸಬ್ಸಿಡಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಇ-ವಾಹನಗಳ ಮಾರಾಟವು ನಿರೀಕ್ಷಿತ ಮಟ್ಟವನ್ನು ತಲುಪದ ಕಾರಣ ಯೋಜನೆಯನ್ನು ಪ್ರಸಕ್ತ ವರ್ಷದ ಜುಲೈ ತಿಂಗಳವರೆಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ಇ-ವಾಹನಗಳ ಮಾರಾಟದ ವೇಗವನ್ನು ಕಾಯ್ದುಕೊಳ್ಳಲು ಸರ್ಕಾರವು ಈ ಯೋಜನೆಯ ಅವಧಿಯನ್ನು ಮತ್ತಷ್ಟು ವಿಸ್ತರಿಸಿ, ಹೊಸ ಬಜೆಟ್ ಅನುದಾನವನ್ನು ಮೀಸಲಿಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಹೊಸ ಸಬ್ಸಿಡಿಯ ನಿಖರ ಮೊತ್ತ ಇನ್ನು ನಿಗದಿಯಾಗದಿದ್ದರೂ, ನೀತಿಯಲ್ಲಿ ಬದಲಾವಣೆ ತರುವುದು ಖಚಿತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತೈಲ ಆಮದು ಮತ್ತು ಮಾಲಿನ್ಯ ಇಳಿಕೆಗೆ ಮಾಸ್ಟರ್ ಪ್ಲಾನ್ ಈ ಪ್ರಮುಖ ನಿರ್ಧಾರದ ಹಿಂದೆ ದೇಶದ ಆರ್ಥಿಕ ಹಾಗೂ ಪರಿಸರ ಹಿತಾಸಕ್ತಿ ಅಡಗಿದೆ. ಭಾರತವು ತನ್ನ ದೈನಂದಿನ ಅಗತ್ಯಕ್ಕೆ ಬೇಕಾಗುವ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು ಸದಾ ಗಗನಮುಖಿಯಾಗಿರುತ್ತವೆ. ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾದಷ್ಟೂ ಇಂಧನದ ಬೇಡಿಕೆ ಇಳಿಕೆಯಾಗಿ, ವಿದೇಶಿ ತೈಲದ ಮೇಲಿನ ಅವಲಂಬನೆ ಹಾಗೂ ಆಮದು ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ದೇಶದ ವಿದೇಶಿ ವಿನಿಮಯ ಮೀಸಲು ಉಳಿಯುವುದರ ಜೊತೆಗೆ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕೆ ದೊಡ್ಡ ಬಲ ಸಿಗಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ, ವಿಶೇಷವಾಗಿ ದೆಹಲಿ ಎನ್‌ಸಿಆರ್‌ನಂತಹ ಪ್ರಮುಖ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಸರ್ಕಾರದ ಸಬ್ಸಿಡಿ ನೆರವು ಮುಂದುವರಿದರೆ ಸಾಮಾನ್ಯ ಜನರು ಪೆಟ್ರೋಲ್ ವಾಹನಗಳ ಬದಲಿಗೆ ಇ-ಸ್ಕೂಟರ್‌ಗಳತ್ತ ಹೆಚ್ಚು ಆಕರ್ಷಿತರಾಗಲಿದ್ದಾರೆ. ಇದು ಇ-ವಾಹನ ಉತ್ಪಾದನಾ ಕಂಪನಿಗಳಿಗೂ ದೊಡ್ಡ ವರದಾನವಾಗಲಿದ್ದು, ದೀರ್ಘಕಾಲದಿಂದ ಅವರು ನಿರೀಕ್ಷಿಸುತ್ತಿದ್ದ ಸಬ್ಸಿಡಿ ಬೆಂಬಲ ಸಿಕ್ಕಂತಾಗುತ್ತದೆ. ದಿನನಿತ್ಯ ಕಚೇರಿ, ಶಾಲೆ ಅಥವಾ ವ್ಯಾಪಾರಕ್ಕಾಗಿ ಪ್ರಯಾಣಿಸುವ ಕುಟುಂಬಗಳಿಗೆ ಪೆಟ್ರೋಲ್ ವೆಚ್ಚಕ್ಕೆ ಹೋಲಿಸಿದರೆ ಚಾರ್ಜಿಂಗ್ ವೆಚ್ಚ ತೀರಾ ಅತ್ಯಲ್ಪವಾಗಿರುವುದರಿಂದ, ಇದು ಜನಸಾಮಾನ್ಯರ ದೈನಂದಿನ ಪ್ರಯಾಣದ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಉಳಿಸಲಿದೆ. ಒಟ್ಟಾರೆಯಾಗಿ, ಈ ಯೋಜನೆಯ ವಿಸ್ತರಣೆಯು ಸಾರ್ವಜನಿಕರ ಹಿತ ಕಾಯುವ ಜೊತೆಗೆ ದೇಶದ ಆರ್ಥಿಕತೆಗೂ ಪೂರಕವಾಗಲಿದೆ.
ಇದನ್ನೂ ಓದಿ: ಫಾಲ್ಟಾ ಚುನಾವಣೆಯಲ್ಲಿ ಟಿಎಂಸಿಗೆ ಹೀನಾಯ ಸೋಲು: ಠೇವಣಿ ಕಳೆದುಕೊಂಡ ಮಮತಾ ಪಕ್ಷ
