TOP NEWS

Mukesh Khanna: ಮದುವೆ ಆಗದೇ ಇರೋದೇಕೆ ಶಕ್ತಿಮಾನ್‌? ಇಲ್ಲಿದೆ ರಹಸ್ಯ

Mukesh Khanna shares why he did not married

ಮುಂಬೈ: ಭಾರತೀಯ ಕಿರುತೆರೆಯ ಅದ್ಭುತ ಶಕ್ತಿಮಾನ್ ಎಂದೇ ಹೆಸರಾದ ನಟ ಮುಕೇಶ್ ಖನ್ನಾ (Mukesh Khanna) ಅವರು ನೇರ ನಡೆ ಹಾಗೂ ನುಡಿಗೆ ಹೆಸರಾದವರು. 67ನೇ ವಯಸ್ಸಿನಲ್ಲೂ ತಮ್ಮ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಹಂಚಿಕೊಳ್ಳುವ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅವಿವಾಹಿತರಾಗಿಯೇ ಉಳಿದಿದ್ದೇಕೆ ಮತ್ತು ಪ್ರೀತಿ ಹಾಗೂ ದಾಂಪತ್ಯದ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ವಿವರಿಸಿದ್ದಾರೆ.

ಸಾಮಾನ್ಯವಾಗಿ ಮದುವೆಯಾಗದವರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಕುತೂಹಲವಿರುತ್ತದೆ. ಆದರೆ ಮುಕೇಶ್ ಖನ್ನಾ ಅವರು ವಿವಾಹ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಮದುವೆಯಾಗದೆ ಒಂಟಿಯಾಗಿದ್ದ ಮಾತ್ರಕ್ಕೆ ಅವರಿಗೆ ದಾಂಪತ್ಯ ಜೀವನದ ಮೇಲೆ ಗೌರವವಿಲ್ಲ ಎಂದು ಅರ್ಥವಲ್ಲ. ಅವರ ಪ್ರಕಾರ, ಮದುವೆ ಎಂಬುದು ಅತ್ಯಂತ ಪವಿತ್ರವಾದ ಮತ್ತು ಅರ್ಥಪೂರ್ಣವಾದ ಬಂಧ. ಇದನ್ನು ಯಾರೂ ಒತ್ತಾಯದಿಂದ ಅಥವಾ ಆತುರದಿಂದ ಮಾಡಿಕೊಳ್ಳಬಾರದು, ಬದಲಿಗೆ ಸಮಯ ಕೂಡಿ ಬಂದಾಗಲೇ ಮದುವೆಯಾಗಬೇಕು ಎನ್ನುವುದು ಅವರ ಅಭಿಪ್ರಾಯ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅವರು ವಿಧಿಯಾಟದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ತಮಗಾಗಿ ಮೀಸಲಾದ ಸಂಗಾತಿ ಎಲ್ಲೋ ಇದ್ದೇ ಇರುತ್ತಾರೆ ಮತ್ತು ಸರಿಯಾದ ಸಮಯ ಬಂದಾಗ ಅವರ ಭೇಟಿಯಾಗಲಿದೆ ಎನ್ನುವ ಅವರು, ಒಂದು ವೇಳೆ ವಿಧಿಯಲ್ಲಿ ಮದುವೆ ಬರೆದಿದ್ದರೆ ಅದು ಈ ಹೊತ್ತಿಗಾಗಲೇ ಆಗಿರುತ್ತಿತ್ತು ಎಂದು ಶಾಂತಚಿತ್ತದಿಂದ ಹೇಳಿದ್ದಾರೆ.

ಮದುವೆಯನ್ನು ಅವರು ಕೇವಲ ಒಂದು ಸಂಬಂಧವಾಗಿ ನೋಡುವುದಿಲ್ಲ. ಇದೊಂದು ಆತ್ಮಗಳ ಮಿಲನ ಎಂಬುದು ಅವರ ಅನಿಸಿಕೆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ, ಜೀವನಸಂಗಾತಿಯು ಹಿಂದಿನ ಜನ್ಮದ ನಂಟನ್ನು ಹೊಂದಿರುತ್ತಾರೆ ಮತ್ತು ನಮ್ಮ ಬದುಕಿನ ಹಾದಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಕಾರಣಕ್ಕಾಗಿಯೇ ಮದುವೆ ಎಂಬುದು ಕೇವಲ ಸಂಗಾತಿಗಾಗಿ ಮಾಡಿಕೊಳ್ಳುವ ಒಪ್ಪಂದವಲ್ಲ, ಅದಕ್ಕೆ ಅದಕ್ಕಿಂತಲೂ ಮಿಗಿಲಾದ ಅರ್ಥವಿದೆ ಎಂದು ಅವರು ಭಾವಿಸುತ್ತಾರೆ.

ಪ್ರೀತಿಯ ವಿಷಯಕ್ಕೆ ಬಂದರೆ, ಜೀವನದಲ್ಲಿ ನಿಜವಾದ ಪ್ರೀತಿ ಕೇವಲ ಒಂದೇ ಬಾರಿ ಆಗಲು ಸಾಧ್ಯ ಎನ್ನುತ್ತಾರೆ ಮುಕೇಶ್ ಖನ್ನಾ. ಪದೇ ಪದೇ ಪ್ರೀತಿಯಲ್ಲಿ ಬೀಳುವುದು ನಿಜವಾದ ಪ್ರೀತಿಯಲ್ಲ, ಅದು ಕೇವಲ ಆಕರ್ಷಣೆ ಅಥವಾ ಕ್ಷಣಿಕ ಭಾವನೆ ಅಷ್ಟೆ. ಕಂಡ ಕಂಡವರಿಗೆಲ್ಲ ‘ಐ ಲವ್ ಯೂ’ ಎಂದು ಹೇಳುವುದರಿಂದ ಆ ಪದದ ಬೆಲೆಯೇ ಹೊರಟುಹೋಗುತ್ತದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

ಹಲವು ಸಂಬಂಧಗಳನ್ನು ಹೊಂದುವುದು ಗಂಡಸ್ತನದ ಲಕ್ಷಣ ಎಂಬ ತಪ್ಪು ಕಲ್ಪನೆಯನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಶಕ್ತಿ ಅಥವಾ ಆತ್ಮವಿಶ್ವಾಸವನ್ನು ತೋರಿಸಿಕೊಳ್ಳಲು ಅನಗತ್ಯ ಸಂಬಂಧಗಳ ಅಗತ್ಯವಿಲ್ಲ. ಪರಸ್ಪರ ಗೌರವ, ನೈತಿಕ ಮೌಲ್ಯಗಳು ಮತ್ತು ಭಾವನಾತ್ಮಕ ತಿಳುವಳಿಕೆ ಮಾತ್ರ ಜೀವನದಲ್ಲಿ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಮಹಿಳೆಯರ ಬಗ್ಗೆ ತಮಗೆ ಅಪಾರ ಗೌರವವಿದ್ದು, ಸಂಬಂಧಗಳನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳುವ ಮೂಲಕ ಮುಕೇಶ್ ಖನ್ನಾ ತಮ್ಮ ಮಾತುಗಳನ್ನು ಮುಗಿಸಿದ್ದಾರೆ.

ಇದನ್ನೂ ಓದಿ:  ಮ್ಯಾಜಿಕ್ ನಂಬರ್ ಸನಿಹದಲ್ಲಿ ಟಿವಿಕೆ; ವಿಜಯ್ ನಿವಾಸಕ್ಕೆ ತ್ರಿಶಾ ಭೇಟಿ!

Leave a Reply

Your email address will not be published. Required fields are marked *