ಬೆಂಗಳೂರು: ಕರ್ನಾಟಕದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧಿಸಿರುವ ಯಶಸ್ಸಿಗೆ ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳೇ ಮೂಲಕಾರಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿಶ್ಲೇಷಿಸಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಕೇರಳದಲ್ಲಿ ಆಡಳಿತ ವಿರೋಧಿ ಅಲೆಯ ನಡುವೆ ಯುಡಿಎಫ್ ಮೈತ್ರಿಕೂಟ ಸಾಧಿಸಿರುವ ವಿಜಯವು ನಿರೀಕ್ಷಿತವಾಗಿತ್ತು ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ದಕ್ಷಿಣದ ಫಲಿತಾಂಶದ ವಿಶ್ಲೇಷಣೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಗೆಲುವಿನ ಬಗ್ಗೆ ಮಾತನಾಡಿದ ಡಿಸಿಎಂ, “ಕ್ಷೇತ್ರದಲ್ಲಿ ಹಲವು ಗೊಂದಲಗಳಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಅಲ್ಪಸಂಖ್ಯಾತರ ಮತಗಳನ್ನು ಎಸ್ಡಿಪಿಐ ಪಕ್ಷವು ಹಂಚಿಕೊಂಡಿದ್ದರಿಂದ ವಿಜಯದ ಅಂತರ ಸ್ವಲ್ಪ ಕಡಿಮೆಯಾಗಿದೆ. ಎಸ್ಡಿಪಿಐ ಸಂಘಟನೆಯನ್ನು ನಾವು ಎಂದಿಗೂ ನಿರ್ಲಕ್ಷ್ಯ ಮಾಡಿಲ್ಲ, ಅದರ ಪ್ರಭಾವದ ಬಗ್ಗೆ ನಮಗೆ ಅರಿವಿತ್ತು” ಎಂದು ತಿಳಿಸಿದರು.
ಶೃಂಗೇರಿ ಫಲಿತಾಂಶದ ಮೇಲೆ ಸಂಚಿನ ಆರೋಪ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆಯಲ್ಲಿ ನಡೆದಿರುವ ಬದಲಾವಣೆಗಳ ಬಗ್ಗೆ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಮತಪತ್ರಗಳ ಬಂಡಲ್ಗಳನ್ನು ಸೀಲ್ ಮಾಡಿದ ಬಳಿಕ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ. ಸೀಲ್ ಒಡೆದು ಕಾಂಗ್ರೆಸ್ಗೆ ಬಿದ್ದಿದ್ದ ಮತಪತ್ರಗಳ ಮೇಲೆ ಉದ್ದೇಶಪೂರ್ವಕವಾಗಿ ಮತ್ತೊಂದು ಗುರುತು ಹಾಕಿ ಆ ಮತಗಳನ್ನು ಅಸಿಂಧುಗೊಳಿಸಲಾಗಿದೆ. ಇದು ಕೇವಲ ಸ್ಥಳೀಯವಲ್ಲ, ಅಂತರಾಷ್ಟ್ರೀಯ ಮಟ್ಟದ ಸಂಚಿನಂತೆ ಕಾಣುತ್ತಿದೆ” ಎಂದು ಅವರು ಗಂಭೀರವಾಗಿ ದೂಷಿಸಿದರು. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಲಿದೆ ಮತ್ತು ಕಾನೂನು ಚೌಕಟ್ಟಿನಲ್ಲಿಯೇ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಜಯನಗರ ಚುನಾವಣೆ ವಿಚಾರವನ್ನು ಪ್ರಸ್ತಾಪಿಸಿದ ಅವರು, “ಸೌಮ್ಯ ರೆಡ್ಡಿ ಅವರು ಅತ್ಯಲ್ಪ ಅಂತರದಲ್ಲಿ ಸೋತ ಪ್ರಕರಣದ ಮರುಎಣಿಕೆ ಇನ್ನೂ ಬಾಕಿ ಇರುವಾಗ, ಶೃಂಗೇರಿಯಲ್ಲಿ ಮಾತ್ರ ಮರುಎಣಿಕೆಗೆ ಇಷ್ಟೊಂದು ವೇಗವಾಗಿ ಆದೇಶ ಬಂದಿದ್ದು ಹೇಗೆ?” ಎಂದು ಪ್ರಶ್ನಿಸಿದರು. ಗಾಯತ್ರಿ ಶಾಂತನಗೌಡ ಅವರಿಗೆ ನ್ಯಾಯ ಸಿಗದಂತೆ ಮಾಡಲು ವ್ಯವಸ್ಥಿತವಾಗಿ ತಡೆ ತರಲಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಾಗಲಕೋಟೆ ಉಪಸಮರದಲ್ಲಿ ಕಾಂಗ್ರೆಸ್ ಗರ್ಜನೆ: ಚರಂತಿಮಠಗೆ ಸೋಲುಣಿಸಿ ‘ಕೈ’ ಹಿಡಿದ ಉಮೇಶ್ ಮೇಟಿ!
