ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಅಚ್ಚರಿಯ ಮುನ್ನಡೆ ಸಾಧಿಸಲು ಕೇವಲ ಅವರ ಸ್ಟಾರ್ ಇಮೇಜ್ ಮಾತ್ರವಲ್ಲ, ಅವರು ನೀಡಿದ ‘ಜನಪ್ರಿಯ ಪ್ರಣಾಳಿಕೆ’ ಕೂಡ ಪ್ರಮುಖ ಕಾರಣವಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಭರಪೂರ ಕೊಡುಗೆಗಳನ್ನು ಘೋಷಿಸುವ ಮೂಲಕ ವಿಜಯ್ ಮತದಾರರ ಮನ ಗೆದ್ದಿದ್ದಾರೆ. ಅಂತಹ ಪ್ರಮುಖ ಭರವಸೆಗಳ ವಿವರ ಇಲ್ಲಿದೆ:
ಮಹಿಳೆಯರಿಗೆ ‘ಮಹಾಲಕ್ಷ್ಮಿ’ ಭಾಗ್ಯ ಮಹಿಳಾ ಮತದಾರರನ್ನು ಸೆಳೆಯಲು ವಿಜಯ್ ಹಲವು ಆಕರ್ಷಕ ಸ್ಕೀಮ್ಗಳನ್ನು ಘೋಷಿಸಿದ್ದಾರೆ. ಮನೆಯ ಯಜಮಾನಿಗೆ ಪ್ರತಿ ತಿಂಗಳು 2,500 ರೂ. ನೇರ ನಗದು ವರ್ಗಾವಣೆ ಹಾಗೂ ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆಯ ಮೂಲಕ ವರ್ಷಕ್ಕೆ 6 ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆಯ ಉಡುಗೊರೆ ಹಾಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಯುವಜನತೆ ಮತ್ತು ಉದ್ಯೋಗಕ್ಕೆ ಬಲ ಯುವಕರೇ ಈ ಪಕ್ಷದ ದೊಡ್ಡ ಶಕ್ತಿಯಾಗಿದ್ದು, ಅವರಿಗೆ ಪೂರಕವಾಗಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ 2,500 ರೂ. ಭತ್ಯೆಯ ಆಫರ್ ನೀಡಲಾಗಿದೆ. ಇದರೊಂದಿಗೆ 5 ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ ಮತ್ತು 5 ಲಕ್ಷ ಯುವಕರಿಗೆ ಇಂಟರ್ನ್ಶಿಪ್ ಅವಕಾಶ ನೀಡುವ ಗುರಿ ಹೊಂದಲಾಗಿದೆ. ವಿಶೇಷವೆಂದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಐ (AI) ತಂತ್ರಜ್ಞಾನದ ಮೂಲಕ ಉಚಿತ ತರಬೇತಿ ನೀಡುವ ಭರವಸೆಯನ್ನು ವಿಜಯ್ ನೀಡಿದ್ದಾರೆ.
ಉಚಿತ ವಿದ್ಯುತ್ ಮತ್ತು ರೈತರ ಸಾಲ ಮನ್ನಾ ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡಲು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಲಾಗಿದೆ. ಕೃಷಿ ವಲಯಕ್ಕೆ ಆದ್ಯತೆ ನೀಡಿರುವ ಟಿವಿಕೆ ಪಕ್ಷವು, ರೈತರ ಸಹಕಾರಿ ಬೆಳೆ ಸಾಲದಲ್ಲಿ ಶೇ. 50ರಷ್ಟು ಮನ್ನಾ ಮಾಡುವುದಾಗಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸುವುದಾಗಿ ತಿಳಿಸಿದೆ.
ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮಾಸಿಕ 3,000 ರೂ. ಪಿಂಚಣಿ ಹಾಗೂ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ವರೆಗಿನ ಬೃಹತ್ ಆರೋಗ್ಯ ವಿಮೆ ಸೌಲಭ್ಯವನ್ನು ಘೋಷಿಸಲಾಗಿದೆ. ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಮತ್ತು ಮೀನುಗಾರರಿಗೆ ಕಷ್ಟಕಾಲದಲ್ಲಿ 27,000 ರೂ. ಆರ್ಥಿಕ ನೆರವು ನೀಡುವ ಮೂಲಕ ಸರ್ವ ಸಮುದಾಯಗಳನ್ನು ವಿಜಯ್ ತಲುಪಿದ್ದಾರೆ.
ಒಟ್ಟಾರೆಯಾಗಿ, ಜನಸಾಮಾನ್ಯರ ದೈನಂದಿನ ಸಂಕಷ್ಟಗಳಿಗೆ ಪರಿಹಾರ ನೀಡುವಂತಹ ಈ ‘ಮಾಸ್’ ಭರವಸೆಗಳೇ ಇಂದು ವಿಜಯ್ ಅವರನ್ನು ತಮಿಳುನಾಡಿನ ಅಧಿಕಾರದ ಗದ್ದುಗೆಯ ಸನಿಹಕ್ಕೆ ತಂದು ನಿಲ್ಲಿಸಿವೆ.
