ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದತ್ತ ಮುನ್ನಡೆಯುತ್ತಿರುವ ಬೆನ್ನಲ್ಲೇ, ಅಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅನುಮಾನ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪದ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆಯ ಕಾನೂನುಬದ್ಧತೆಯ ಬಗ್ಗೆ ಸಚಿವರು ಪ್ರಶ್ನೆ ಎತ್ತಿದ್ದಾರೆ.
ಕಾನೂನೂ ರೀತಿಯ ತನಿಖೆ ಅಗತ್ಯ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವುದು ಎಲ್ಲರಿಗೂ ತಿಳಿದಿದೆ. ಸುಮಾರು 96 ಲಕ್ಷ ಮತಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಇದು ನಿಜವೇ ಆಗಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕ. ಇಷ್ಟೊಂದು ಬೃಹತ್ ಸಂಖ್ಯೆಯ ಮತಗಳನ್ನು ಯಾವ ಆಧಾರದ ಮೇಲೆ ತೆಗೆದುಹಾಕಲಾಗಿದೆ ಮತ್ತು ಇದು ಕಾನೂನಿನ ಚೌಕಟ್ಟಿನಲ್ಲಿ ನಡೆದಿದೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ನೆರೆಯ ರಾಜ್ಯಗಳ ಚುನಾವಣಾ ಫಲಿತಾಂಶದ ಟ್ರೆಂಡ್ ಬಗ್ಗೆಯೂ ಅವರು ಮಾತನಾಡಿದರು. ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಪಕ್ಷದ ಮುನ್ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, “ವಿಜಯ್ ಅವರಿಗೆ ಚಿತ್ರರಂಗದಲ್ಲಿದ್ದ ಜನಪ್ರಿಯತೆ ಮತಗಳಾಗಿ ಬದಲಾಗುತ್ತವೆಯೇ ಎಂಬ ಚರ್ಚೆ ಮೊದಲಿನಿಂದಲೂ ಇತ್ತು. ಆದರೆ ಈಗಿನ ಟ್ರೆಂಡ್ ಗಮನಿಸಿದರೆ ಅವರ ಪರವಾಗಿ ಒಂದು ದೊಡ್ಡ ಅಲೆ ಇರುವುದು ಸ್ಪಷ್ಟವಾಗಿದೆ. ಇನ್ನು ಪುದುಚೇರಿಯಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇತ್ತು, ಅಲ್ಲಿ ಪರಿಸ್ಥಿತಿ ಅದೇ ರೀತಿ ಇದೆ. ಆದರೆ ತಮಿಳುನಾಡಿನಲ್ಲಿ ಡಿಎಂಕೆ ಹಿನ್ನಡೆ ಅನುಭವಿಸಿರುವುದು ಅನಿರೀಕ್ಷಿತ,” ಎಂದು ಹೇಳಿದರು.
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಆರಂಭಿಕ ಹಿನ್ನಡೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಅಂತಿಮವಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮೇ ‘ಸರ್ಜರಿ’ ಸಂಚಲನ: 13 ಸಚಿವರಿಗೆ ಕೊಕ್?
