ನಮ್ಮ ಸಂಸ್ಕೃತಿಯಲ್ಲಿ ಅನ್ನವನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ‘ಅನ್ನಂ ಪರಬ್ರಹ್ಮ ಸ್ವರೂಪಂ’ ಎಂಬ ಮಾತಿನಂತೆ, ಅನ್ನಕ್ಕೆ ನಾವು ನೀಡುವ ಗೌರವವೇ ನಮ್ಮ ಮನೆಯ ಸುಖ-ಶಾಂತಿಯ ಮೂಲವಾಗಿರುತ್ತದೆ. ಆದರೆ, ಇಂದಿನ ದಿನಗಳಲ್ಲಿ ಅನೇಕರು ಊಟ ಮುಗಿದ ತಕ್ಷಣ ಆಲಸ್ಯದಿಂದ ಅಥವಾ ಬೇಗ ಕೆಲಸ ಮುಗಿಸುವ ಭರದಲ್ಲಿ ತಾವು ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯುವ (Food Habits) ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ.
ಮಹಾಲಕ್ಷ್ಮಿಗೆ ಅವಮಾನ ಮಾಡಿದಂತೆ
ವಾಸ್ತು ಶಾಸ್ತ್ರದ ಪ್ರಕಾರ, ನಾವು ಊಟ ಮಾಡಿದ ತಟ್ಟೆಯಲ್ಲಿ ಕೈ ತೊಳೆದರೆ ಅದು ಅನ್ನಪೂರ್ಣೇಶ್ವರಿ ದೇವಿಗೆ ಹಾಗೂ ಮಹಾಲಕ್ಷ್ಮಿಗೆ ಮಾಡುವ ಅವಮಾನ ಎಂದು ನಂಬಲಾಗಿದೆ. ತಟ್ಟೆಯಲ್ಲಿ ಉಳಿದಿರುವ ಎಂಜಲು ಅನ್ನದ ಮೇಲೆ ಕೈ ತೊಳೆದುಕೊಂಡರೆ, ಆ ತಟ್ಟೆಯನ್ನು ಅಪವಿತ್ರಗೊಳಿಸಿದಂತಾಗುತ್ತದೆ. ಇಂತಹ ಅಭ್ಯಾಸವು ಮನೆಯಲ್ಲಿ ದಾರಿದ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಅಡ್ಡಿಯಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಅಷ್ಟೇ ಅಲ್ಲದೆ, ಊಟ ಮಾಡಿದ ತಟ್ಟೆಯನ್ನು ಗೌರವಯುತವಾಗಿ ನೋಡಿಕೊಳ್ಳುವುದು ನಮ್ಮ ಸಂಪ್ರದಾಯದ ಒಂದು ಭಾಗವಾಗಿದೆ.
ಆಹಾರ ವೇಸ್ಟ್ ಮಾಡಬಾರದು
ಆಹಾರವನ್ನು ಎಂದಿಗೂ ವ್ಯರ್ಥ ಮಾಡಬಾರದು. ಊಟ ಮಾಡುವಾಗ ತಟ್ಟೆಯ ಸುತ್ತಲೂ ಅಗುಳುಗಳು ಬೀಳದಂತೆ ಎಚ್ಚರ ವಹಿಸಬೇಕು. ಹಾಗೆಯೇ, ಊಟದ ತಟ್ಟೆಯನ್ನು ಒಂದೇ ಕೈಯಿಂದ ಹಿಡಿಯುವುದು ಅಥವಾ ಊಟವಾದ ಮೇಲೆ ತಟ್ಟೆಯಲ್ಲಿ ಎಂಜಲು ಬಿಡುವುದು ಒಳ್ಳೆಯದಲ್ಲ. ಊಟದ ನಂತರ ತಟ್ಟೆಯನ್ನು ಸ್ವಚ್ಛಗೊಳಿಸಿ ಬೇರೆಡೆ ಇಡುವುದು ಉತ್ತಮ. ಇಂತಹ ಸಣ್ಣಪುಟ್ಟ ವಿಷಯಗಳ ಬಗ್ಗೆ ಗಮನ ಹರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ವಾಸ್ತು ತಜ್ಞರ ಅಭಿಪ್ರಾಯ. ಆದ್ದರಿಂದ ಮುಂದಿನ ಬಾರಿ ಊಟ ಮಾಡುವಾಗ ಈ ಎಚ್ಚರಿಕೆಯನ್ನು ವಹಿಸಿ, ನಮ್ಮ ಸಂಪ್ರದಾಯ ಮತ್ತು ಅನ್ನದ ಗೌರವವನ್ನು ಕಾಪಾಡಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದ್ರೆ ಸಕ್ಸಸ್ ಫಿಕ್ಸ್
