ಪಶ್ಚಿಮ ಬಂಗಾಳ: ವಿಧಾನಸಭೆ (West Bengal) ಚುನಾವಣೆಯ ಮೊದಲ ಹಂತದ ಮತದಾನವು ಭರ್ಜರಿ ಉತ್ಸಾಹದೊಂದಿಗೆ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ರಾಜ್ಯದಲ್ಲಿ ಶೇ. 78.77ರಷ್ಟು ಮತದಾನ ದಾಖಲಾಗಿದೆ. ಭಾರಿ ಪ್ರಮಾಣದಲ್ಲಿ ಜನರು ಮತಗಟ್ಟೆಗಳಿಗೆ ಆಗಮಿಸುತ್ತಿರುವ ನಡುವೆಯೇ, ಮುರ್ಷಿದಾಬಾದ್, ಬಿರ್ಭೂಮ್ ಮತ್ತು ದಕ್ಷಿಣ ದಿನಾಜ್ಪುರ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಂಘರ್ಷಗಳು ವರದಿಯಾಗಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೇಲೆ ದಾಳಿ
ಬಿರ್ಭೂಮ್ನ ಲಾಬ್ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಶೀಶ್ ಓಜಾ ಅವರ ಚುನಾವಣಾ ಏಜೆಂಟ್ ವಿಶ್ವಜಿತ್ ಮಂಡಲ್ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬೂತ್ ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಂಡಲ್ ತಿಳಿಸಿದ್ದಾರೆ. ದಾಳಿಕೋರರು ಮಂಡಲ್ ಅವರ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಇತ್ತ ದಕ್ಷಿಣ ದಿನಾಜ್ಪುರದ ಕುಮಾರ್ಗಂಜ್ನಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ನಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ವಿಡಿಯೋ ದೃಶ್ಯಾವಳಿಗಳಲ್ಲಿ ಗುರುತಿಸಲಾದವರನ್ನು ತಕ್ಷಣವೇ ಬಂಧಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.
VIDEO | West Bengal election: BJP candidate from South Dinajpur manhandled allegedly by TMC workers even as a security person tries to protect him. #AssemblyPollsWithPTI #WestBengalPollsWithPTI
— Press Trust of India (@PTI_News) April 23, 2026
(Full video available on PTI Videos – https://t.co/n147TvrpG7) pic.twitter.com/NeCAxYA08p
ಇನ್ನು ಮುರ್ಷಿದಾಬಾದ್ನ ನವಾಡ ಕ್ಷೇತ್ರದಲ್ಲಿ ಮಾಜಿ ಟಿಎಂಸಿ ನಾಯಕ ಹ್ಯುಮಾಯೂನ್ ಕಬೀರ್ ಅವರ ಆಮ್ ಜನತಾ ಉನ್ನಯನ್ ಪಕ್ಷದ (ಎಜೆಯುಪಿ) ಕಾರ್ಯಕರ್ತರು ಮತ್ತು ಟಿಎಂಸಿ ನಡುವೆ ಘರ್ಷಣೆ ಉಂಟಾಗಿದೆ. ಬೂತ್ ಬಳಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಮತ್ತೊಂದೆಡೆ, ಆಸನ್ಸೋಲ್ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರಾ ಪೌಲ್ ಅವರ ಕಾರನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಒಟ್ಟಾರೆ, ಭದ್ರತಾ ಪಡೆಗಳು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದರೂ, ಅಲ್ಲಲ್ಲಿ ಮತಗಟ್ಟೆ ವಶಪಡಿಸಿಕೊಳ್ಳುವ ಯತ್ನ ಮತ್ತು ರಾಜಕೀಯ ಕಾರ್ಯಕರ್ತರ ನಡುವಿನ ಸಂಘರ್ಷಗಳು ನಡೆಯುತ್ತಲೇ ಇವೆ. ಮೊದಲ ಹಂತದಲ್ಲಿ ಒಟ್ಟು 16 ಜಿಲ್ಲೆಗಳ 152 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮತದಾನದ ಪ್ರಮಾಣ ಹೆಚ್ಚಿದ್ದರೂ, ಅಲ್ಲಲ್ಲಿ ನಡೆಯುತ್ತಿರುವ ಇಂತಹ ಹಿಂಸಾತ್ಮಕ ಘಟನೆಗಳು ಕಾನೂನು ಸುವ್ಯವಸ್ಥೆಯ ಕುರಿತು ಆತಂಕ ಮೂಡಿಸಿವೆ.
