CRIME: ಪ್ರೀತಿಗೆ ಅಡ್ಡಿಯಾದ ಸ್ನೇಹಿತನ ಬರ್ಬರ ಹತ್ಯೆ, ಆರೋಪಿಗಳು ಅಂದರ್

Crime nanjangud swami missing case big twist

ನಂಜನಗೂಡು: ಫೆಬ್ರವರಿಯಿಂದ ಕಾಣೆ ಆಗಿದ್ದ ನಂಜನಗೂಡಿನ (Crime) ದೇವೇರಮ್ಮನಹಳ್ಳಿ ಪಾಳ್ಯದ ಸ್ವಾಮಿ ಎನ್ನುವವರ ಪ್ರಕರಣದಲ್ಲಿ ಟ್ವಿಸ್ಟ್‌ ಸಿಕ್ಕಿದ್ದು, ಸ್ನೇಹಿತರೇ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಆನಂದ.ಎಸ್ ಅವರ ನೇತೃತ್ವದಲ್ಲಿ ಈ ಪ್ರಕರಣವನ್ನ ಪೊಲೀಸರು ಬೇದಿಸುವಲ್ಲಿ ಯಶಸ್ವಿ ಆಗಿದ್ದು, ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ.

ಏನಿದು ಪ್ರಕರಣ?

ದಿನಾಂಕ 04.03.2026 ರಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇವೀರಮ್ಮನಹಳ್ಳಿಪಾಳ್ಯ ಗ್ರಾಮದ ಸವಿತಾ ಎಂಬುವವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಗಂಡ ಸ್ವಾಮಿ ಎಂಬುವವರು ದಿನಾಂಕ:12.02.2026 ರಂದು ಕಾಣೆಯಾಗಿರುವುದಾಗಿ ನೀಡಿದ ದೂರಿನಂತೆ ಮೊ.ಸಂ 48/2026 ಕಲಂ ಮನುಷ್ಯ ಕಾಣೆಯಾಗಿದ್ದಾನೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ತನಿಖಾ ಕಾಲದಲ್ಲಿ ಕಾಣೆಯಾದ ಸ್ವಾಮಿ ಹಾಗೂ ಫಿರ್ಯಾದಿದಾರರಾದ ಸವಿತಾ ಇಬ್ಬರೂ ಮೂಗ ಮತ್ತು ಕಿವುಡರಾಗಿದ್ದು, ಇವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕೆಲವು ವಿಡಿಯೋ ಕಾಲ್ ಇರುವುದು ಕಂಡು ಬಂದಿರುತ್ತದೆ. ಇದರ ಆಧಾರದ ಮೇಲೆ ಸವಿತಾರವರನ್ನು ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಿಚಾರಣೆ ಮಾಡಿ ಅವರ ಹೇಳಿಕೆಯ ಆಧಾರದ ಮೇರೆಗೆ 1) ಶ್ರೀನಿವಾಸ ಬಿನ್ ಲೇಟ್ ಇವರಯ್ಯ, 37 ವರ್ಷ, ಹನುಮಪುರ ಗ್ರಾಮ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ಹಾಗೂ 2) ಗಂಗಾಧರ ಬಿ.ಎಸ್ ಬಿನ್ ಲೇಟ್ ಶಿವರಾಜು, 23 ವರ್ಷ, ಅಮೃತೂರು ಗ್ರಾಮ, ತುಮಕೂರು ಜಿಲ್ಲೆ ರವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಸದರಿಯವರು ಸಹ ಮೂಗ ಮತ್ತು ಕಿವುಡರಾಗಿದ್ದು ಅವರನ್ನು ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ವಿಚಾರಣೆ ಮಾಡಿದಾಗ ಫಿರ್ಯಾದಿ ಸವಿತಾ ಮತ್ತು ಸ್ವಾಮಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಸವಿತಾಳಿಗೆ ಮೇಲ್ಕಂಡ ಆರೋಪಿ ಶ್ರೀನಿವಾಸರವರ ಪರಿಚಯವಾಗಿ ಇಬ್ಬರು ಪರಸ್ಪರ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದು, ಶ್ರೀನಿವಾಸನು ಸವಿತಾಳನ್ನು ಪ್ರೀತಿಸುತ್ತಿರುವುದಾಗಿ ಹಾಗೂ ಹಣಕಾಸಿನ ಸಹಾಯವನ್ನು ಮಾಡಿದ್ದು, ಸವಿತಾಳ ಮೂಲಕ ಆಕೆಯ ಗಂಡ ಸ್ವಾಮಿಯು ಸಹ ಶ್ರೀನಿವಾಸನಿಗೆ ಪರಿಚಯವಾಗಿ ಸ್ವಾಮಿಗೂ ಸಹ ಸಾಲವಾಗಿ ಹಣ ನೀಡಿರುತ್ತಾನೆ.

ಪ್ರೀತಿಗೆ ಸ್ವಾಮಿ ಅಡ್ಡಿ ಎಂದು ನಿರ್ಧರಿಸಿ ಕೊಲೆ

ಶ್ರೀನಿವಾಸನು ಸವಿತಾಳನ್ನು ಪ್ರೀತಿಸುತ್ತಿದ್ದು ಅದಕ್ಕೆ ಸ್ವಾಮಿಯು ಅಡ್ಡಿಯಾಗಿರುತ್ತಾನೆಂದು ಹಾಗೂ ಸ್ವಾಮಿಗೆ ಸಾಲವಾಗಿ ಕೊಟ್ಟ ಹಣವನ್ನು ವಾಪಸ್ ಕೊಡುವುದಿಲ್ಲ ಎಂದು ಈತನನ್ನು ಕೊಲೆ ಮಾಡಿದ್ದಲ್ಲಿ ಸವಿತಾಳನ್ನು ತಾನು ಮದುವೆಯಾಗಬಹುದೆಂದು ಭಾವಿಸಿ ಶ್ರೀನಿವಾಸನು ದಿನಾಂಕ 12.02.2026 ರಂದು ಸ್ವಾಮಿಗೆ ಹಣ ನೀಡುವುದಾಗಿ ಸ್ವಾಮಿಯನ್ನು ಕುಣಿಗಲ್ ತಾಲ್ಲೂಕಿನ ಅಮೃತೂರಿಗೆ ಕರೆಸಿಕೊಂಡು ಸ್ವಾಮಿಗೆ ಮದ್ಯಪಾನ ಮಾಡಿಸಿ, ತನ್ನ ಸ್ನೇಹಿತರಾದ ಗಂಗಾಧರ ಮತ್ತು ಇನ್ನೊಬ್ಬ (ಅವರು ಸಹ ಮೂಗ ಮತ್ತು ಕಿವುಡರು) ವ್ಯಕ್ತಿಯೊಂದಿಗೆ ಸೇರಿ ಕುಣಿಗಲ್ ತಾಲ್ಲೂಕು ಹೊಸಪುರ ಗ್ರಾಮದ ಒಂದು ಜಮೀನಿನಲ್ಲಿ ಎಲ್ಲರೂ ಊಟ ಮಾಡಿ ನಂತರ ಮೂವರು ಸೇರಿ ಸ್ವಾಮಿಯ ಕುತ್ತಿಗೆಗೆ ಹೊಡೆದು ಕೊಲೆ ಮಾಡಿ, ಒಂದು ಕಲ್ಲನ್ನು ಮೃತ ದೇಹಕ್ಕೆ ಕಟ್ಟಿ ಮೃತ ದೇಹವನ್ನು ಬಾವಿಗೆ ಹಾಕಿ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿರುತ್ತಾರೆ.

ದಿನಾಂಕ 07.04.2026 ರಂದು ಆರೋಪಿತರಾದ ಶ್ರೀನಿವಾಸ ಮತ್ತು ಗಂಗಾಧರ ರವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ಅವರುಗಳು ತಿಳಿಸಿದಂತೆ ಒಬ್ಬರು interpreter ಸಹಾಯದೊಂದಿಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೊಸಪುರ ಗ್ರಾಮಕ್ಕೆ ಹೋಗಿ ಆರೋಪಿತರು ತೋರಿಸಿದ ಕಪಿಲಾ ಬಾವಿಯಲ್ಲಿ ಹುಡುಕಿ ಮೃತ ದೇಹವನ್ನು ಬಾವಿಯಿಂದ ಹೊರತೆಗೆದಿದ್ದು, ಮೃತ ದೇಹವನ್ನು ಮೃತನ ತಾಯಿ ಲಕ್ಷಮ್ಮ ರವರು ಗುರುತಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಬೈಕ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುತ್ತೆ. ಘನ ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿರುತ್ತದೆ.

ಈ ಕೊಲೆ ಪ್ರಕರಣವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ. ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ. ಮಲ್ಲೇಶ್ ಹಾಗೂ ಶ್ರೀ ನಾಗೇಶ್.ಎಲ್, ನಂಜನಗೂಡು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಿ.ಎಸ್.ರಘು ರವರ ಮಾರ್ಗದರ್ಶನದಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಆನಂದ.ಎಸ್, ಪಿ.ಎಸ್.ಐ ಶ್ರೀ ನಾಗರಾಜು, ಎ.ಎಸ್.ಐ ಮಹೇಶ್.ಕೆ, ಹೆಡ್ ಕಾನ್ಸ್ ಟೇಬಲ್ ಗಳಾದ ಶ್ರೀ ರಾಜೇಗೌಡ.ಬಿ.ಎಸ್, ಸುರೇಶ.ಬಿ, ದೇವರಾಜು.ಡಿ, ವೆಂಕಟೇಶ್.ಪಿ, ಶ್ರೀಮತಿ ರೇಖಾ, ಹಾಗೂ ಕಾನ್ಸ್ ಟೇಬಲ್ ಗಳಾದ ಶ್ರೀ ಅನಿಲ್.ಪಿ, ಗಣೇಶ.ಆರ್.ಆರ್, ಸುಶೀಲ್ ಕುಮಾರ್.ಹೆಚ್.ಎಲ್, ಮತ್ತು ಜೀಪ್ ಚಾಲಕ ಸುರೇಶ್.ಪಿ.ಬಿ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದು, ಸದರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ರವರು ಪ್ರಶಂಸಿಸುತ್ತಾರೆ

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ, ಇಬ್ಬರ ದುರ್ಮರಣ

Leave a Reply

Your email address will not be published. Required fields are marked *