Narendra Modi: ಎಲ್‌ಡಿಎಫ್- ಯುಡಿಎಫ್ ಒಂದೇ ನಾಣ್ಯದ ಎರಡು ಮುಖಗಳು: ಮೋದಿ

Narendra modi slams opposition parties

ತಿರುವಲ್ಲಾ: ಕೇರಳದ ತಿರುವಲ್ಲಾದಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಪ್ರತಿಪಕ್ಷಗಳು ‘ಕೇರಳ ಸ್ಟೋರಿ’, ‘ಕಾಶ್ಮೀರ್ ಫೈಲ್ಸ್’ ಮತ್ತು ‘ಧುರಂಧರ್’ ಅಂತಹ ಚಿತ್ರಗಳನ್ನು ಸುಳ್ಳು ಎಂದು ಬಿಂಬಿಸುತ್ತಿವೆ, ಆದರೆ ವಾಸ್ತವದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳೇ ಸುಳ್ಳು ಹೇಳುವುದರಲ್ಲಿ ನಿಸ್ಸೀಮವಾಗಿವೆ ಎಂದು ಅವರು ಟೀಕಿಸಿದರು. ಈ ಎರಡು ರಂಗಗಳು ಇಂದು ಸುಳ್ಳಿನ ಕಾರ್ಖಾನೆಗಳಾಗಿ ಬದಲಾಗಿವೆ ಎಂದು ಅವರು ಆರೋಪಿಸಿದರು.

ಪ್ರತಿಪಕ್ಷಗಳಿಂದ ಅಪಪ್ರಚಾರ

ವಿದೇಶಿ ವಂತಿಗೆ ನಿಯಂತ್ರಣ ಕಾಯ್ದೆ (FCRA), ಏಕರೂಪ ನಾಗರಿಕ ಸಂಹಿತೆ (UCC) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA) ಬಗ್ಗೆ ಪ್ರತಿಪಕ್ಷಗಳು ಜನರಲ್ಲಿ ಇಲ್ಲದ ಭೀತಿ ಮೂಡಿಸುತ್ತಿವೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದರು. ಗೋವಾದಲ್ಲಿ ದಶಕಗಳಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದ್ದರೂ ಅದರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಕೇವಲ ಚುನಾವಣಾ ಲಾಭಕ್ಕಾಗಿ ಮತ್ತು ನನ್ನನ್ನು ನಿಂದಿಸುವ ಒಂದೇ ಉದ್ದೇಶದಿಂದ ಕಾಂಗ್ರೆಸ್ ದೇಶದ ಭದ್ರತೆಯನ್ನೇ ಪಣಕ್ಕಿಡುತ್ತಿದೆ ಎಂದು ಅವರು ದೂರಿದರು. ಗಲ್ಫ್ ರಾಷ್ಟ್ರಗಳೊಂದಿಗೆ ಭಾರತ ಹೊಂದಿರುವ ಉತ್ತಮ ಬಾಂಧವ್ಯಕ್ಕೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ ಎಂದು ಅವರು ಎಚ್ಚರಿಸಿದರು.

ಇರಾನ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಸುಮಾರು ಒಂದು ಕೋಟಿ ಭಾರತೀಯ ವಲಸಿಗರ ಹಿತಾಸಕ್ತಿಯೊಂದಿಗೆ ಕಾಂಗ್ರೆಸ್ ಆಟವಾಡುತ್ತಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದರು. ಇರಾನ್‌ನಲ್ಲಿ ಸಿಲುಕಿದ್ದ ವಿವಿಧ ರಾಜ್ಯಗಳ ಮೀನುಗಾರರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಸರ್ಕಾರ ಶ್ರಮಿಸುತ್ತಿದ್ದರೂ, ಕಾಂಗ್ರೆಸ್ ಮಾತ್ರ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಗಲ್ಫ್ ದೇಶಗಳು ಭಾರತವನ್ನು ಶತ್ರುವಿನಂತೆ ನೋಡುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಯುದ್ಧದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನನ್ನ ಮೊದಲ ಆದ್ಯತೆಯಾಗಿದೆ. ಅಲ್ಲಿರುವ ನಿಮ್ಮ ಮಕ್ಕಳು ಅಥವಾ ಸಂಬಂಧಿಕರು ಯಾರೂ ಒಬ್ಬಂಟಿಯಲ್ಲ, ಭಾರತ ಸರ್ಕಾರ ಅವರ ಬೆನ್ನಿಗೆ ನಿಂತಿದೆ ಎಂದು ಅನಿವಾಸಿ ಭಾರತೀಯರ ಕುಟುಂಬಗಳಿಗೆ ಅವರು ಭರವಸೆ ನೀಡಿದರು.

ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಇದೇ ವೇಳೆ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವ್ಯಂಗ್ಯವಾಡಿದ ಮೋದಿ, ಇವರು ಒಬ್ಬರನ್ನೊಬ್ಬರು ಬಿಜೆಪಿಯ ‘ಬಿ-ಟೀಮ್’ ಎಂದು ಕರೆದುಕೊಳ್ಳುತ್ತಾ ಕುಸ್ತಿ ಪಂದ್ಯದಂತೆ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು. ಶಬರಿಮಲೆ ದೇಗುಲದ ಚಿನ್ನ ನಾಪತ್ತೆ ಪ್ರಕರಣದಲ್ಲೂ ಈ ಎರಡೂ ರಂಗಗಳು ಶಾಮೀಲಾಗಿವೆ ಎಂದು ಆರೋಪಿಸಿದ ಅವರು, ಕೇರಳದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಗುಡುಗಿದರು.

ಇದನ್ನೂ ಓದಿ: ಭಾರತೀಯರ ಸುರಕ್ಷತೆ ಕಾಪಾಡಲು ಕೇಂದ್ರ ಸಿದ್ಧ: ಮೋದಿ

Leave a Reply

Your email address will not be published. Required fields are marked *