SIRAGUPPA: ದ್ವೇಷದಿಂದ ರಸ್ತೆ ಅಗೆದ ಭೂಪ, ರೋಗಿಯನ್ನ ಹೆಗಲ ಮೇಲೆ ಹೊತ್ತು ಸಾಗಿದ ಹಳ್ಳಿಗರು

Siraguppa man destroy road which connects village

ಸಿರಗುಪ್ಪ: ಹಳ್ಳಿಗಳಲ್ಲಿ ಜಮೀನು ವ್ಯಾಜ್ಯಗಳು ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿರುವುದಕ್ಕೆ ಸಾಕ್ಷಿಯಾದ ಭೀಕರ ಘಟನೆಯೊಂದು ಸಿರಗುಪ್ಪ (Siraguppa) ತಾಲೂಕಿನ ಬಗ್ಗೂರು ಗ್ರಾಮದಲ್ಲಿ ನಡೆದಿದೆ.

ರಸ್ತೆಯನ್ನೇ ಅಗೆದ ಭೂಪ

ರಸ್ತೆ ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಜಮೀನು ಮಾಲೀಕನೊಬ್ಬ ಸಾರ್ವಜನಿಕರು ಓಡಾಡುವ ದಾರಿಯನ್ನೇ ಜೆಸಿಬಿ ಮೂಲಕ ಅಗೆದು ಹಾಕಿದ್ದಾನೆ. ಇದರಿಂದಾಗಿ ಗ್ರಾಮದ ಬಾಲಕಿಯೊಬ್ಬಳು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬರಲು ಸಾಧ್ಯವಾಗದೆ, ಗ್ರಾಮಸ್ಥರು ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಗೆದ ರಸ್ತೆಯಲ್ಲೇ ನಡೆದು ಸಾಗಿಸಬೇಕಾದ ದುಃಸ್ಥಿತಿ ಎದುರಾಗಿದೆ.

ಬಗ್ಗೂರು ಗ್ರಾಮದಲ್ಲಿ ಜನರು ಓಡಾಡಲು ಬಳಸುತ್ತಿದ್ದ ತಾತ್ಕಾಲಿಕ ರಸ್ತೆಯು ಓರ್ವ ವ್ಯಕ್ತಿಯ ಖಾಸಗಿ ಜಾಗದಲ್ಲಿದೆ, ಈ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮಸ್ಥರು ಮತ್ತು ಮಾಲೀಕನ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿತ್ತು. ಈ ಹಿಂದೆ ಜನರು ಓಡಾಡದಂತೆ ತಡೆಯಲು ಮಾಲೀಕನು ರಸ್ತೆಯ ಮೇಲೆ ಚರಂಡಿ ನೀರು ಬಿಟ್ಟು ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಇದೆ. ಈ ವಿಚಾರವಾಗಿ ಮೂರು ತಿಂಗಳ ಹಿಂದೆ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಸದ್ಯ ತಡೆಯಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದ ಮಾಲೀಕ ಶುಕ್ರವಾರ ಮುಂಜಾನೆ ಎರಡು ಜೆಸಿಬಿಗಳನ್ನು ತರಿಸಿ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಕಿದ್ದಾನೆ.

ಸಂಕಷ್ಟದಲ್ಲಿ ಗ್ರಾಮಸ್ಥರು

ರಸ್ತೆ ಅಗೆದ ಅದೇ ಸಮಯದಲ್ಲಿ ಗ್ರಾಮದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ರವಾನಿಸಲು ಆಂಬುಲೆನ್ಸ್ ಕರೆಸಲಾಗಿತ್ತು. ಆದರೆ ರಸ್ತೆ ಅಗೆದು ಕಂದಕದಂತಾಗಿದ್ದರಿಂದ ಆಂಬುಲೆನ್ಸ್ ಗ್ರಾಮದೊಳಗೆ ಬರಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಗ್ರಾಮದ ಯುವಕರು ಮತ್ತು ಹಿರಿಯರು ಸೇರಿ ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು, ಅಗೆದ ರಸ್ತೆಯ ಗುಂಡಿಗಳನ್ನು ದಾಟಿ ಆಂಬುಲೆನ್ಸ್ ಇದ್ದಲ್ಲಿಗೆ ತಲುಪಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ವ್ಯಕ್ತಿಗತ ಹಗೆತನ ಮತ್ತು ಜಮೀನು ವಿವಾದದಿಂದಾಗಿ ಇಡೀ ಗ್ರಾಮವೇ ಸಂಕಷ್ಟಕ್ಕೆ ಸಿಲುಕಿದ್ದು, ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಚ್ಚಾ ತೈಲ ಸಮಸ್ಯೆ ಇಲ್ಲ, ಆತಂಕ ಬೇಡ: ಬಿವೈ ವಿಜಯೇಂದ್ರ

Leave a Reply

Your email address will not be published. Required fields are marked *