ಬೆಂಗಳೂರು: ಏಪ್ರಿಲ್ ಅಂತ್ಯದ ವೇಳೆಗೆ ಬೆಂಗಳೂರಿನ ಎಲ್ಲ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಬಿಎ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಬೆಂಗಳೂರು ರಸ್ತೆ ಅಭಿವೃದ್ಧಿಗೆ 5 ಸಾವಿರ ಕೋಟಿ
ನಿನ್ನೆ ಬೆಂಗಳೂರಿನ ಜಿಬಿಎ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ. ಬಳಿಕ ಸುದ್ದಿಗಾರರೊಂದಿಗೆ ಅವರು ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಇದುವರೆಗೆ 5 ಸಾವಿರದ 65 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಏಪ್ರಿಲ್ ಅಂತ್ಯದ ವೇಳೆಗೆ ಬೆಂಗಳೂರಿನ ಎಲ್ಲ ರಸ್ತೆಗಳ ಬ್ಲಾಕ್ ಮತ್ತು ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ ಎಂದರು. ಅಲ್ಲದೆ, ಜಿಬಿಎ ಲಾಂಛನವನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಆಯುಕ್ತರು ಅದನ್ನು ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಮಾದರಿ ಕಟ್ಟಡವನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಬೇಕು. ಸಚಿವರು, ಶಾಸಕರಿಗಾಗಿ ಕಾಯದೆ ಕಾಮಗಾರಿಯನ್ನು ಆರಂಭಿಸಬೇಕು. ಪ್ರತಿನಿತ್ಯ ನಡೆಯುವ ಕಾಮಗಾರಿಯ ಪ್ರಗತಿಯ ವಿವರಗಳನ್ನು ಛಾಯಾಚಿತ್ರ ಸಮೇತ ಸರ್ಕಾರಕ್ಕೆ ರವಾನಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಳೆಗಾಲಕ್ಕೂ ಮೊದಲು ಕೆಲಸ ಪೂರ್ಣ
ಕಳೆದ ಮೂರು ತಿಂಗಳಿನಲ್ಲಿ ಬೆಂಗಳೂರು ಹೊರ ವರ್ತುಲ ರಸ್ತೆಗೆ 420 ಕೋಟಿ ರೂಪಾಯಿ, ವಾರ್ಡ್ ರಸ್ತೆಗಳಿಗೆ 82 ಪ್ಯಾಕೇಜ್ ಗಳಲ್ಲಿ ಒಂದು ಸಾವಿರ ಕೋಟಿ ಹಾಗೂ ರಾಜ್ಯ ಸರ್ಕಾರದ 81 ಪ್ಯಾಕೇಜ್ ಗಳಲ್ಲಿ ಒಂದು ಸಾವಿರದ 241 ಕೋಟಿ ರೂಪಾಯಿ ಸೇರಿದಂತೆ ಒಟ್ಟು 2 ಸಾವಿರದ 671 ಕೋಟಿ ರೂಪಾಯಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಈ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಮಳೆಗಾಲ ಆರಂಭಕ್ಕೆ ಮುನ್ನವೇ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಬೆಂಗಳೂರಿನ 10 ಲಕ್ಷ ಆಸ್ತಿಗಳ ಸ್ಕ್ಯಾನಿಂಗ್ ಪೂರ್ಣವಾಗಿದ್ದು, ಏಪ್ರಿಲ್ 3ನೇ ಭಾನುವಾರ ದಾಖಲೆಗಳ ವಿತರಣೆ ಹಾಗೂ ನಾಗರಿಕರಿಗೆ ಇ-ಖಾತಾ ವಿತರಣೆಗೂ ವ್ಯವಸ್ಥೆ ಮಾಡಲಾಗುತ್ತದೆ. ಇದೇ ವೇಳೆ ಆಸ್ತಿ ತೆರಿಗೆ ಮಾಡದೇ ಬೃಹತ್ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಆಸ್ತಿಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಘೋಷಿಸಿದರು.
ಇದನ್ನೂ ಓದಿ: ಸಂಕಷ್ಟದಲ್ಲಿರುವ ನೇಕಾರರಿಗೆ ನೆರವು ನೀಡಲಾಗುತ್ತೆ: ಕೆ ಸುಧಾಕರ್
