TOP NEWS

Vande Mataram: ಇನ್ನು ಮುಂದೆ ‘ವಂದೇ ಮಾತರಂ’ಗೂ ರಾಷ್ಟ್ರಗೀತೆಯಷ್ಟೇ ಗೌರವ: ಕೇಂದ್ರ ಸರ್ಕಾರದಿಂದ ಕಾನೂನು ತಿದ್ದುಪಡಿ

Vande Mataram to get National Anthem Status

ನವದೆಹಲಿ: ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರೇರಕ ಶಕ್ತಿಯಾಗಿದ್ದ ‘ವಂದೇ ಮಾತರಂ’ (Vande Mataram) ಗೀತೆಗೆ ಸಾಂವಿಧಾನಿಕವಾಗಿ ಅತ್ಯುನ್ನತ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು, ಈ ಗೀತೆಯನ್ನು ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಸಮಾನವಾಗಿ ಪರಿಗಣಿಸುವ ಪ್ರಸ್ತಾವನೆಗೆ ಅಸ್ತು ಎಂದಿದೆ.

ಅವಮಾನಿಸಿದರೆ ಕಠಿಣ ಶಿಕ್ಷೆ: ಬಂಕಿಮಚಂದ್ರ ಚಟರ್ಜಿ ಅವರು ಈ ಗೀತೆಯನ್ನು ರಚಿಸಿ 150 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ‘ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆ ಕಾಯ್ದೆ’ಗೆ ತಿದ್ದುಪಡಿ ತರಲಾಗುತ್ತಿದೆ. ಹೊಸ ನಿಯಮದಂತೆ, ಈ ಗೀತೆಯನ್ನು ಹಾಡುವಾಗ ಅಡ್ಡಿಪಡಿಸಿದರೆ ಅಥವಾ ಯಾವುದೇ ರೀತಿ ಅಪಮಾನ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗಲಿದೆ. ಇಂತಹ ಸಂದರ್ಭದಲ್ಲಿ ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಸೆರೆವಾಸ ಅಥವಾ ದಂಡ ವಿಧಿಸಲು ಅವಕಾಶವಿದೆ. ಅಷ್ಟೇ ಅಲ್ಲದೆ, ಎರಡನೇ ಬಾರಿ ಇದೇ ತಪ್ಪು ಮಾಡಿದರೆ ಕನಿಷ್ಠ ಒಂದು ವರ್ಷದ ಕಡ್ಡಾಯ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಬಂಗಾಳದ ಪರಂಪರೆಗೆ ಗೌರವ: ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ. ಬಂಗಾಳದ ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿರುವ ಈ ಗೀತೆಯನ್ನು ಈ ಹಿಂದೆ ಕಡೆಗಣಿಸಲಾಗಿತ್ತು ಎಂದು ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಈಗಾಗಲೇ ಎಲ್ಲಾ ಪ್ರಮುಖ ಸರ್ಕಾರಿ ಸಮಾರಂಭಗಳಲ್ಲಿ ವಂದೇ ಮಾತರಂನ ಆರೂ ಚರಣಗಳನ್ನು ಹಾಡುವುದನ್ನು ಶಿಫಾರಸು ಮಾಡಿದೆ.

ಹೊಸ ಸಾಂಸ್ಕೃತಿಕ ಬದಲಾವಣೆ: ಈ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಪಾಸ್ ಆದಲ್ಲಿ, ದೇಶದ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಇರುವಷ್ಟೇ ಕಾನೂನು ರಕ್ಷಣೆ ‘ವಂದೇ ಮಾತರಂ’ ಗೀತೆಗೂ ಲಭಿಸಲಿದೆ. ಸರ್ಕಾರದ ಈ ನಡೆ ದೇಶಾದ್ಯಂತ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆಯಾದರೂ, ದೇಶದ ಐತಿಹಾಸಿಕ ಪರಂಪರೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.

ಇದನ್ನೂ ಓದಿ: ಬಿಜೆಪಿಯ ಚುನಾವಣಾ ತಂತ್ರಗಾರಿಕೆಗೆ ಶಶಿ ತರೂರ್ ಮೆಚ್ಚುಗೆ: ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನಕ್ಕೆ ಕರೆ!

Leave a Reply

Your email address will not be published. Required fields are marked *