ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಜೆಪಿಯ ಡಿ.ಎನ್. ಜೀವರಾಜ್ (DN Jeevaraj) ಅವರು ವಿಜಯಶಾಲಿಯಾಗಿದ್ದಾರೆ. ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ. ಆದರೆ ಈ ರಾಜಕೀಯ ವಿಜಯದ ಜೊತೆಗೆ ಈಗ ದೈವಿಕ ಪವಾಡವೊಂದು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಏನಿದು ದೈವಿಕ ಪವಾಡ? ನಾಲ್ಕು ತಿಂಗಳ ಹಿಂದೆ ಶಬರಿಮಲೆಯಲ್ಲಿ ಪೂಜಾರಿಯೊಬ್ಬರು ಜೀವರಾಜ್ ಗೆಲುವಿನ ಬಗ್ಗೆ ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದೆ. ಬಾಳೆಹೊನ್ನೂರಿನ ಹಿಂದೂ ಕಾರ್ಯಕರ್ತ ಜಗದೀಶ್ ಎಂಬುವವರು ಡಿ.ಎನ್. ಜೀವರಾಜ್ ಅವರು ಕಾನೂನು ಹೋರಾಟದಲ್ಲಿ ಜಯಗಳಿಸಿ ಮತ್ತೆ ಶಾಸಕರಾಗಲಿ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದರು. ಮಕರ ಜ್ಯೋತಿ ದರ್ಶನದ ವೇಳೆ ಶಬರಿಮಲೆಗೆ ತೆರಳಿದ್ದ ಅವರು, ಅಲ್ಲಿನ ಪೂಜಾರಿಯೊಬ್ಬರ ಬಳಿ ಕಣಿ ಕೇಳಿದ್ದರು. ಆಗ ಆ ಪೂಜಾರಿ, “ನಿಮ್ಮ ನಾಯಕ ಶೀಘ್ರದಲ್ಲೇ ಶಾಸಕರಾಗುತ್ತಾರೆ, ಆತಂಕ ಪಡಬೇಡಿ” ಎಂದು ಅಭಯ ನೀಡಿದ್ದರು ಎನ್ನಲಾಗಿದೆ.
ಮೂರು ವರ್ಷಗಳ ಸತತ ಹೋರಾಟ: ಕಳೆದ ಚುನಾವಣೆಯ ಫಲಿತಾಂಶದ ವೇಳೆ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ಕಾನೂನು ಸಮರದ ನಂತರ ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆಯಲ್ಲಿ ಜೀವರಾಜ್ ಅವರು ಅತಿ ಹೆಚ್ಚು ಮತಗಳನ್ನು ಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಪೂಜಾರಿ ಭವಿಷ್ಯ ನುಡಿದ ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಜೀವರಾಜ್ ಅವರಿಗೆ ಜಯ ಸಿಕ್ಕಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಸಂಭ್ರಮ ಮೂಡಿಸಿದೆ. ಜೀವರಾಜ್ ಅವರ ಈ ಗೆಲುವು ಕೇವಲ ಕಾನೂನು ಹೋರಾಟದ ಫಲ ಮಾತ್ರವಲ್ಲ, ಅದು ದೈವಿಕ ಆಶೀರ್ವಾದವೂ ಹೌದು ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ: ಕಾಲ ಕೂಡಿ ಬರಲಿ ಎಂದು ಕಾಯುತ್ತಿದ್ದೇವೆ: ನಾಯಕತ್ವ ಬದಲಾವಣೆ ಕುರಿತು ಡಿ.ಕೆ. ಸುರೇಶ್ ಮಾರ್ಮಿಕ ಮಾತು
