ಮುಂಬೈ: ಕಳೆದ ಕೆಲವು ದಿನಗಳಿಂದ, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತೆಲುಗು ನಿರ್ಮಾಪಕ ದಿಲ್ ರಾಜು ಅವರೊಂದಿಗೆ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಡುವೆ ಹೊಸ ಸಿನಿಮಾದಲ್ಲಿ ನಟಿ ಸಮಂತಾ ರುತ್ ಪ್ರಭು (Samantha) ಅವರು ಬಾಲಿವುಡ್ ಬಾಯ್‌ಜಾನ್ ಸಲ್ಮಾನ್ ಖಾನ್ ಅವರ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ರಾಜ್-ಡಿಕೆ ನಿರ್ದೇಶನದಲ್ಲಿ ಸಿನಿಮಾ
ಕೆಲ ಮಾಹಿತಿಗಳ ಪ್ರಕಾರ, ಈ ಸಿನಿಮಾವನ್ನ ಫೇಮಸ್ ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಮಾತ್ರ ಸಿಕ್ಕಿಲ್ಲ. ಇತ್ತೀಚಿನ ಸುದ್ದಿಗಳ ಪ್ರಕಾರ, ಆಕ್ಷನ್ ಕಾಮಿಡಿ ಡ್ರಾಮ ಎಂದು ಹೇಳಲಾಗುವ ಈ ಚಿತ್ರದಲ್ಲಿ ಸಮಂತಾ ಅವರನ್ನು ನಾಯಕಿಯಾಗಿ ಬಹುತೇಕ ಅಂತಿಮಗೊಳಿಸಲಾಗಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ.
ಸಿನಿಮಾದಲ್ಲಿ ನಟಿಸಲಿದ್ದಾರಾ ನಯನತಾರಾ?
ಇನ್ನು ಈ ವಿಚಾರ ಹೊರಬರುವುದಕ್ಕೂ ಮೊದಲು ನಟಿ ನಯನತಾರಾ ಈ ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಈ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿದ್ದವು. ಇದೀಗ ಇಬ್ಬರೂ ನಟಿಯರು ಈ ಚಿತ್ರದ ಭಾಗವಾಗುತ್ತಾರೋ ಅಥವಾ ಸಮಂತಾ ಅಂತಿಮವಾಗಿ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಏಪ್ರಿಲ್ 2026 ರಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಮಂತಾ ಅವರ ಮಾ ಇಂತಿ ಬಂಗಾರಂ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದು ಮೇ 15, 2026 ರಂದು ತೆರೆಗೆ ಬರಲಿದೆ.
ಇದನ್ನೂ ಓದಿ: ಸತಿಪತಿಗಳಾದ ರಶ್ಮಿಕಾ-ವಿಜಯ್, ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ
