ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರದ ಬೆನ್ನೆಲುಬಾಗಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purple Line) ಎರಡು ಪ್ರತ್ಯೇಕ ಕಾರಣಗಳಿಂದಾಗಿ ಪ್ರಯಾಣಿಕರು ಅಡಚಣೆ ಎದುರಿಸುವಂತಾಗಿದೆ. ಒಂದು ನಿಗದಿತ ದುರಸ್ತಿ ಕಾರ್ಯವಾದರೆ, ಮತ್ತೊಂದು ತಾಂತ್ರಿಕ ದೋಷದಿಂದ ಉಂಟಾದ ಸಮಸ್ಯೆಯಾಗಿದೆ.
ಎರಡು ಗಂಟೆಗಳ ಕಾಲ ಸಂಚಾರ ಇರಲ್ಲ
ಮೇ 10 ರಂದು ರೈಲು ಸಂಚಾರ ಸ್ಥಗಿತ: ಹಳಿಗಳ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಮೇ 10ರ ಭಾನುವಾರ ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ನೇರಳೆ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ರೈಲು ಸಂಚಾರ ಇರುವುದಿಲ್ಲ. ಈ ಸಮಯದಲ್ಲಿ ಹೊಸಹಳ್ಳಿ (ಬಾಲಗಂಗಾಧರ ನಾಥ ಸ್ವಾಮಿ ನಿಲ್ದಾಣ) ಯಿಂದ ಕಬ್ಬನ್ ಪಾರ್ಕ್ ನಿಲ್ದಾಣದವರೆಗೆ ರೈಲುಗಳು ಓಡುವುದಿಲ್ಲ. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜು ಭಾಗಗಳಲ್ಲಿ ಕೆಲಸ ನಡೆಯಲಿರುವುದೇ ಇದಕ್ಕೆ ಕಾರಣ.
ಆದರೆ, ಇದೇ ಸಮಯದಲ್ಲಿ ಚೆಲ್ಲಘಟ್ಟದಿಂದ ವಿಜಯನಗರದವರೆಗೆ ಹಾಗೂ ಎಂ.ಜಿ. ರಸ್ತೆಯಿಂದ ವೈಟ್‌ಫೀಲ್ಡ್‌ವರೆಗೆ ಎಂದಿನಂತೆ ರೈಲುಗಳು ಲಭ್ಯವಿರುತ್ತವೆ. ಬೆಳಿಗ್ಗೆ 9 ಗಂಟೆಯ ನಂತರ ಪೂರ್ಣ ಪ್ರಮಾಣದ ಸೇವೆ ಪುನಾರಂಭಗೊಳ್ಳಲಿದೆ.
ವಿದ್ಯುತ್ ದೋಷದಿಂದ ಪ್ರಯಾಣಿಕರ ಪರದಾಟ: ಇನ್ನೊಂದೆಡೆ, ಮಂಗಳವಾರ ಸಂಜೆ ಕಚೇರಿಗಳಿಂದ ಮನೆಗೆ ಮರಳುವ ಸಮಯದಲ್ಲಿ ನೇರಳೆ ಮಾರ್ಗದಲ್ಲಿ ದಿಢೀರ್ ವಿದ್ಯುತ್ ವ್ಯತ್ಯಯ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ತಾಂತ್ರಿಕ ದೋಷದಿಂದಾಗಿ ಸುಮಾರು 15 ನಿಮಿಷಗಳ ಕಾಲ ರೈಲುಗಳು ನಿಲ್ದಾಣಗಳಲ್ಲೇ ಸ್ಥಗಿತಗೊಂಡಿದ್ದವು. ಕುಂದಲಹಳ್ಳಿ ಸೇರಿದಂತೆ ಹಲವು ಕಡೆ ರೈಲುಗಳು ಅರ್ಧದಲ್ಲೇ ನಿಂತಿದ್ದರಿಂದ ಮತ್ತು ಎಸಿ ಕೆಲಸ ಮಾಡದ ಕಾರಣ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣ ಅನುಭವಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್ (BMRCL), ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ತಂಡವು ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದೆ. ಏಕಾಏಕಿ ಉಂಟಾದ ಈ ಅಡಚಣೆಯಿಂದಾಗಿ ಸಾವಿರಾರು ಉದ್ಯೋಗಿಗಳು ನಿಲ್ದಾಣಗಳಲ್ಲಿ ಕಾದು ಸುಸ್ತಾದರು. ಸದ್ಯ ಪರಿಸ್ಥಿತಿಯನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದ್ದು, ಸಾಧ್ಯವಾದಷ್ಟು ಪರ್ಯಾಯ ಸಾರಿಗೆ ಬಳಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
