TOP NEWS

Mallikarjun Kharge: ಯೂಸ್‌ಲೆಸ್ ಫೆಲೋಸ್: ಡಿಕೆಶಿ ಪರ ಘೋಷಣೆ ಕೂಗಿದ ಕಾರ್ಯಕರ್ತರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗರಂ

Mallikarjun Kharge Scolds Congress Workers Shouting slogan dk shivakumar

ಬೆಂಗಳೂರು: ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪಕ್ಷದ ಕಾರ್ಯಕರ್ತರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ನೂತನ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭ ಭಾನುವಾರ ನಡೆದಿತ್ತು. ಈ ವೇಳೆ ಸಭೆಯಲ್ಲಿದ್ದ ಕೆಲವು ಕಾರ್ಯಕರ್ತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ‘ಡಿಕೆ-ಡಿಕೆ’ ಎಂದು ಜೋರಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದು ಮಲ್ಲಿಕಾರ್ಜುನ ಖರ್ಗೆ ಅವರ ಕೋಪಕ್ಕೆ ಕಾರಣವಾಯಿತು.

ಸುಮ್ಮನೆ ಇರಿ ಎಂದ ಖರ್ಗೆ

ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರನ್ನು ವೇದಿಕೆಯಿಂದಲೇ ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡ ಖರ್ಗೆ, “ಸುಮ್ಮನೆ ಇರಿ, ಕೆಳಗೆ ಕೂತ್ಕೊಳ್ಳಿ! ಇಡೀ ದೇಶವೇ ನಿಮ್ಮ ಕೈಗೆ ಬಂದುಬಿಟ್ಟಿದೆ ಎನ್ನುವಂತೆ ಆಡುತ್ತಿದ್ದೀರಾ, ಯೂಸ್‌ಲೆಸ್ ಫೆಲೋಸ್!” ಎಂದು ಗದರಿದರು. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಎದ್ದು ನಿಂತು, ಸನ್ನೆ ಮಾಡುವ ಮೂಲಕ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮತ್ತು ಶಾಂತರಾಗಿರುವಂತೆ ಮಾಡಲು ಪ್ರಯತ್ನಿಸಿದರು.

ಮುಂದುವರಿದು ಮಾತನಾಡಿದ ಖರ್ಗೆ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೇ ಹೊರತು ಯಾವುದೇ ಒಬ್ಬ ವೈಯಕ್ತಿಕ ನಾಯಕನಿಗೆ ಸೀಮಿತವಾದ ಸಭೆಯಲ್ಲ ಎಂದು ನೆನಪಿಸಿದರು. ಪಕ್ಷವನ್ನು ಬಲಪಡಿಸಲು ಮತ್ತು ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡೊಯ್ಯಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಒಬ್ಬೊಬ್ಬರು ಒಂದೊಂದು ಹೆಸರನ್ನು ಹಿಡಿದು ಕೂಗುತ್ತಿದ್ದರೆ, ಉಳಿದವರೆಲ್ಲ ಇಲ್ಲಿ ಕಸ ಗುಡಿಸಲು ಬಂದಿದ್ದಾರೆಯೇ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ತಮ್ಮ ಸುದೀರ್ಘ ಅನುಭವವನ್ನು ಉಲ್ಲೇಖಿಸಿದ ಅವರು, ಪ್ರತಿಯೊಬ್ಬ ಕಾರ್ಯಕರ್ತನಿಗೂ ಪಕ್ಷವೇ ಅಡಿಪಾಯ ಎಂಬುದನ್ನು ಮರೆಯಬಾರದು ಎಂದರು. ಅಲ್ಲದೆ, ಸಭೆಯಲ್ಲಿ ಶಿಸ್ತು ಉಲ್ಲಂಘಿಸಿದವರ ದೃಶ್ಯಾವಳಿಗಳನ್ನು ಪರಿಶೀಲಿಸಿ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ಸಮಯದಿಂದ ನಡೆಯುತ್ತಿದ್ದ ನಾಯಕತ್ವದ ಗೊಂದಲಗಳಿಗೆ ತೆರೆ ಎಳೆದು, ಮುಂಬರುವ 2028ರ ಮೇ ತಿಂಗಳ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಹೈಕಮಾಂಡ್ ಮುಂದಾಗಿದೆ. ಜೂನ್ ತಿಂಗಳಿನಲ್ಲಿ ಸಿದ್ದರಾಮಯ್ಯ ಅವರ ಬದಲಿಗೆ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿತ್ತು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದಾಗಿನಿಂದಲೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆದಿತ್ತು. ಆಗ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮನ್ನಣೆ ನೀಡಿ, ಡಿ.ಕೆ. ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಹುದ್ದೆ ನೀಡುವ ‘ಅಧಿಕಾರ ಹಂಚಿಕೆ’ ಸೂತ್ರದ ಭರವಸೆ ನೀಡಿತ್ತು.

ಕಳೆದ ವರ್ಷದ ನವೆಂಬರ್ ವೇಳೆಗೆ ಸಿದ್ದರಾಮಯ್ಯ ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿದ್ದಂತೆ, ಡಿ.ಕೆ. ಶಿವಕುಮಾರ್ ಬೆಂಬಲಿಗರು ಮುಖ್ಯಮಂತ್ರಿ ಬದಲಾವಣೆಗಾಗಿ ದೆಹಲಿ ನಾಯಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಈ ಬೇಡಿಕೆಗೆ ಸಮ್ಮತಿಸಿತು. ಇದರ ಬೆನ್ನಲ್ಲೇ ಮೇ 28ರಂದು ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಅದಾಗಿ ಒಂದು ವಾರದ ನಂತರ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಎಲ್ಲಾ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಅಶಿಸ್ತಿನ ನಡೆಗೆ ಖರ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ರಂಪ್ ವಿರುದ್ಧ ಇಟಲಿ ಪ್ರಧಾನಿ ಮೆಲೋನಿ ತೀವ್ರ ಆಕ್ರೋಶ: ಯಾರ ಮುಂದೂ ಭಿಕ್ಷೆ ಬೇಡುವುದಿಲ್ಲ’ ಎಂದು ತಿರುಗೇಟು

Leave a Reply

Your email address will not be published. Required fields are marked *