ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ದೈತ್ಯ ಪ್ರತಿಭೆ, ಹಿರಿಯ ಸಾಹಿತಿ ಹಾಗೂ ಪ್ರಸಿದ್ಧ ಪತ್ರಕರ್ತ ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಲಂಕೇಶ್ (Indira Lankesh) ಅವರು ಸೋಮವಾರ ವಯೋಸಹಜ ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರ ನಿಧನಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ನಾಡಿನ ಸಾಹಿತ್ಯ ಮತ್ತು ರಾಜಕೀಯ ವಲಯದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಇಂದಿರಾ ಲಂಕೇಶ್ ಅವರು, ಪುತ್ರ ಇಂದ್ರಜಿತ್ ಲಂಕೇಶ್ ಹಾಗೂ ಪುತ್ರಿ ಕವಿತಾ ಲಂಕೇಶ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಹಿರಿಯ ಪುತ್ರಿ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಭೀಕರ ಘಟನೆಯಿಂದ ಇಂದಿರಾ ಅವರು ತೀವ್ರವಾಗಿ ನೊಂದಿದ್ದರು. ಆ ಬಳಿಕ ಅವರು ತಮ್ಮ ಮಗಳು ಕವಿತಾ ಲಂಕೇಶ್ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು.
ಲಂಕೇಶರ ಯಶಸ್ಸಿನ ಹಿಂದಿನ ಚೇತನ; ಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಪಿ. ಲಂಕೇಶ್ ಅವರು ಸಾಹಿತ್ಯ, ಸಿನಿಮಾ ಹಾಗೂ ಪತ್ರಿಕೋದ್ಯಮ ರಂಗದಲ್ಲಿ ಬರೆದ ಇತಿಹಾಸದ ಹಿಂದೆ ಇಂದಿರಾ ಲಂಕೇಶ್ ಅವರ ಪಾತ್ರ ಅನನ್ಯವಾಗಿತ್ತು. ಕೇವಲ ಗೃಹಣಿಯಾಗಿಷ್ಟೇ ಸೀಮಿತವಾಗದೆ ಪುಸ್ತಕ ಪ್ರಕಾಶನ, ಉದ್ಯಮ ಹಾಗೂ ಸಾಹಿತ್ಯ ರಚನೆಯಲ್ಲಿ ಅವರು ಗುರುತಿಸಿಕೊಂಡಿದ್ದರು. ಎಂತಹದ್ದೇ ಸವಾಲುಗಳು ಎದುರಾದರೂ ಬಂಡೆಯಂತಹ ದೃಢ ವಿಶ್ವಾಸದಿಂದ ಬದುಕಿದ ಇಂದಿರಾ ಅವರು ಇಂದಿನ ಮಹಿಳೆಯರಿಗೆ ದೊಡ್ಡ ಪ್ರೇರಣೆ,” ಎಂದು ಸ್ಮರಿಸಿದ್ದಾರೆ. ಅಲ್ಲದೆ, ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಒಡನಾಡಿಗಳು ಹಾಗೂ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ನಾಡಿನ ಖ್ಯಾತ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ದಿವಂಗತ ಪಿ.ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಲಂಕೇಶ್ ಅವರ ನಿಧನದ ವಿಷಯ ತಿಳಿದು ಅತೀವ ದುಃಖವಾಗಿದೆ.
— DK Shivakumar (@DKShivakumar) June 15, 2026
ಪಿ.ಲಂಕೇಶ್ ಅವರ ಸಾಹಿತ್ಯ, ಮಾಧ್ಯಮ ಹಾಗೂ ಚಿತ್ರರಂಗದ ಸಾಧನೆಗೆ ಇಂದಿರಾ ಲಂಕೇಶ್ ಅವರು ಬೆನ್ನೆಲುಬಾಗಿದ್ದರು. ಜೊತೆಗೆ ವ್ಯವಹಾರ, ಬರವಣಿಗೆ ಹಾಗೂ ಪುಸ್ತಕ ಪ್ರಕಟಣೆಯಲ್ಲೂ ತಮ್ಮನ್ನು… pic.twitter.com/146DwMOa5q
‘ಹುಳಿಮಾವು ಮತ್ತು ನಾನು’ ಮೂಲಕ ನೆನಪಾದ ಬದುಕು
ದೈತ್ಯ ಪ್ರತಿಭೆ ಪಿ. ಲಂಕೇಶ್ ಅವರೊಂದಿಗಿನ ತಮ್ಮ ದಾಂಪತ್ಯ ಜೀವನ ಹಾಗೂ ಬದುಕಿನ ಏಳುಬೀಳುಗಳ ಸುಂದರ ಅನುಭವಗಳನ್ನು ಇಂದಿರಾ ಲಂಕೇಶ್ ಅವರು “ಹುಳಿಮಾವು ಮತ್ತು ನಾನು” ಎಂಬ ವಿಶಿಷ್ಟ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಅವರ ನಿಧನದಿಂದ ಲಂಕೇಶ್ ಪತ್ರಿಕೆ ಬಳಗ ಹಾಗೂ ಕನ್ನಡದ ಪ್ರಗತಿಪರ ಸಾಹಿತ್ಯ ವಲಯದಲ್ಲಿ ಶೋಕದ ಛಾಯೆ ಮೂಡಿದೆ.
ಇದನ್ನೂ ಓದಿ: ಇನ್ಮುಂದೆ ವೋಟರ್ ಐಡಿ ಇದ್ದವರಿಗಷ್ಟೇ ಉಚಿತ ವಿದ್ಯುತ್, ಹೊರ ರಾಜ್ಯದವರಿಗೆ ಗೃಹಜ್ಯೋತಿ ಕಟ್?
