Crime: ಅಹಮದಾಬಾದ್ ಪುಟ್ಟ ಮಕ್ಕಳ ಸಾವು ಪ್ರಕರಣ: ದೋಸೆ ಹಿಟ್ಟಿನ ನಿಗೂಢತೆ ಬೆನ್ನತ್ತಿದ ಪೊಲೀಸರು

Crime dosa batter death case cops suspects parents

ಗುಜರಾತ್:‌ ಅಹಮದಾಬಾದ್‌ನ ಚಾಂದ್‌ಖೇಡಾದಲ್ಲಿ ದೋಸೆ ಸೇವಿಸಿದ ನಂತರ ಇಬ್ಬರು ಪುಟ್ಟ ಸಹೋದರಿಯರು ಮೃತಪಟ್ಟ ಘಟನೆ ಈಗ ತೀವ್ರ (Crime) ತನಿಖೆಗೆ ಒಳಪಟ್ಟಿದೆ. ಈ ದುರಂತಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರ (FSL) ತಂಡ ಹರಸಾಹಸ ಪಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ತಂಡವು ಮೃತ ಮಕ್ಕಳ ಮನೆಗೆ ಭೇಟಿ ನೀಡಿ, ಅಂದು ಬಳಸಿದ್ದ ಪಾತ್ರೆಗಳು, ಬಟ್ಟೆಗಳು, ಚಾಪೆ ಹಾಗೂ ಮಕ್ಕಳಿಗೆ ನೀಡಲಾಗಿದ್ದ ಔಷಧಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.

ಏನಿದು ಘಟನೆ?

ಮಾರುತಿ ಪ್ಲಾಜಾ ಸೊಸೈಟಿಯ ನಿವಾಸಿ ವಿಮಲ್ ಪ್ರಜಾಪತಿ ಅವರು ಸ್ಥಳೀಯ ಘನಶ್ಯಾಮ್ ಡೈರಿಯಿಂದ ದೋಸೆ ಹಿಟ್ಟನ್ನು ತಂದಿದ್ದರು. ಅದನ್ನು ಸೇವಿಸಿದ ನಂತರ ಇಡೀ ಕುಟುಂಬದ ಆರೋಗ್ಯ ಹದಗೆಟ್ಟಿತ್ತು. ಈ ದುರಂತದಲ್ಲಿ ಮೂರು ತಿಂಗಳ ರಹಾ ಮತ್ತು ನಾಲ್ಕು ವರ್ಷದ ಮಿಶ್ರಿ ಎಂಬ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಘಟನೆ ನಡೆದ ನಂತರ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ತನಿಖೆ ಮುಂದುವರಿದಂತೆ ಹಲವು ಆಘಾತಕಾರಿ ಮತ್ತು ನಿಗೂಢ ಅಂಶಗಳು ಹೊರಬರುತ್ತಿವೆ. ಹಸುಗೂಸಿನ ಮೃತದೇಹವನ್ನು ಹೂತುಹಾಕಲಾಗಿದ್ದ ಜಾಗದಿಂದ ಹೊರತೆಗೆದು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರಿಗೆ ಎದುರಾಗಿರುವ ದೊಡ್ಡ ಪ್ರಶ್ನೆಯೆಂದರೆ, ಅದೇ ಡೈರಿಯಿಂದ ದೋಸೆ ಹಿಟ್ಟು ಖರೀದಿಸಿದ ಇತರ ಯಾವ ಗ್ರಾಹಕರಿಗೂ ಯಾವುದೇ ತೊಂದರೆಯಾಗಿಲ್ಲ ಎಂಬುದು. ಎಲ್ ಡಿವಿಷನ್ ಎಸಿಪಿ ಡಿ.ವಿ. ರಾಣಾ ಅವರು ನೀಡಿರುವ ಮಾಹಿತಿ ಪ್ರಕಾರ, ಅಂದು ಅದೇ ಬ್ಯಾಚ್‌ನ ದೋಸೆ ಹಿಟ್ಟು ಖರೀದಿಸಿದ ಇತರರನ್ನು ಸಂಪರ್ಕಿಸಿದಾಗ ಯಾರಿಗೂ ಆಹಾರ ವಿಷಪೂರಿತವಾದ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಕೇವಲ ಈ ಒಂದು ಕುಟುಂಬದ ಮಕ್ಕಳು ಮಾತ್ರ ಮೃತಪಟ್ಟಿರುವುದು ಸಾವಿನ ಸುತ್ತಲಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಿಸಿಟಿ ದೃಶ್ಯ ಪರಿಶೀಲನೆ

ಸದ್ಯ ಪೊಲೀಸರು ತಂದೆ ವಿಮಲ್ ಪ್ರಜಾಪತಿ ಅವರು ಡೈರಿಯಿಂದ ಹಿಟ್ಟು ಖರೀದಿಸಿ ಮನೆಗೆ ತಲುಪುವವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಅಂಗಡಿಯಿಂದ ನೇರವಾಗಿ ಮನೆಗೆ ಬಂದಿದ್ದಾರೆಯೇ ಅಥವಾ ದಾರಿಯಲ್ಲಿ ಎಲ್ಲಿಯಾದರೂ ನಿಂತಿದ್ದರೇ ಎಂಬುದನ್ನು ಪತ್ತೆಹಚ್ಚಲು ನಿಮಿಷಕ್ಕೆ ನಿಮಿಷದ ವಿವರಗಳನ್ನು ಕಲೆಹಾಕಲಾಗುತ್ತಿದೆ. ಡೈರಿಯ ಹಿಟ್ಟಿನಲ್ಲಿ ತೊಂದರೆಯಿಲ್ಲದಿದ್ದರೆ, ಈ ಕುಟುಂಬದ ಆಹಾರದಲ್ಲಿ ವಿಷ ಸೇರಿದ್ದು ಹೇಗೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ವೈದ್ಯರು ನೀಡುವ ಅಂತಿಮ ವರದಿ ಮತ್ತು ಎಫ್‌ಎಸ್‌ಎಲ್ ತನಿಖೆಯ ನಂತರವಷ್ಟೇ ಈ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.

ಇದನ್ನೂ ಓದಿ: ಪ್ರೀತಿಗೆ ಅಡ್ಡಿಯಾದ ಸ್ನೇಹಿತನ ಬರ್ಬರ ಹತ್ಯೆ, ಆರೋಪಿಗಳು ಅಂದರ್

Leave a Reply

Your email address will not be published. Required fields are marked *