ನವದೆಹಲಿ: ಬಾಲಿವುಡ್ನ ಸಾರ್ವಕಾಲಿಕ ಬ್ಲಾಕ್ಬಸ್ಟರ್ ಚಿತ್ರ ‘ತ್ರಿ ಇಡಿಯಟ್ಸ್’ (3 Idiots) ಸಿನಿಮಾದಲ್ಲಿ ಆಮೀರ್ ಖಾನ್ (Aamir Khan) ನಟಿಸಿದ್ದ ಐಕಾನಿಕ್ ಪಾತ್ರ ‘ಫುನ್ಸುಖ್ ವಾಂಗ್ಡು’ (ರಾಂಚೋ), ಲಡಾಖ್ನ ಖ್ಯಾತ ಶಿಕ್ಷಣ ಸುಧಾರಕ ಸೋನಂ ವಾಂಗ್ಚುಕ್ ಅವರ ಜೀವನದಿಂದ ಪ್ರೇರಿತವಾಗಿದೆ ಎಂಬ ದಶಕಗಳ ಕಾಲದ ನಂಬಿಕೆಗೆ ಸ್ವತಃ ಆಮೀರ್ ಖಾನ್ ತೆರೆ ಎಳೆದಿದ್ದಾರೆ. ಸೋನಂ ವಾಂಗ್ಚುಕ್ ಅವರ ಜೀವನಕ್ಕೂ ಹಾಗೂ ಆ ಪಾತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಮೀರ್ ಖಾನ್, ಚಿತ್ರದ ಸ್ಕ್ರಿಪ್ಟ್ ಬರೆಯುವಾಗಾಗಲಿ ಅಥವಾ ಸಿನಿಮಾ ಮಾಡುವಾಗಾಗಲಿ ತನಗಾಗಲಿ ಅಥವಾ ಚಿತ್ರದ ಬರಹಗಾರರಿಗಾಗಲಿ ಸೋನಂ ವಾಂಗ್ಚುಕ್ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಅವರನ್ನು ವೈಯಕ್ತಿಕವಾಗಿಯೂ ತಾನು ಬಲ್ಲವನಾಗಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಸದ್ಯ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ (NEET) ಪರೀಕ್ಷಾ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ಸುಧಾರಣೆಗೆ ಆಗ್ರಹಿಸಿ ಸೋನಂ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಆಮೀರ್ ಖಾನ್ ಸಂಪೂರ್ಣ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ತೀವ್ರ ಕಳವಳ ಹಂಚಿಕೊಂಡಿದ್ದಾರೆ.
ತ್ರಿ ಇಡಿಯಟ್ಸ್ ಚಿತ್ರದಲ್ಲಿ ‘ಚತುರ್ ರಾಮಲಿಂಗಂ’ ಪಾತ್ರದಲ್ಲಿ ನಟಿಸಿದ್ದ ಸಹ ನಟ ಓಮಿ ವೈದ್ಯ ಇತ್ತೀಚೆಗೆ ಸೋನಂ ಪ್ರತಿಭಟನೆಗೆ ಬೆಂಬಲ ಸೂಚಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ಫುನ್ಸುಖ್ ವಾಂಗ್ಡು ಪಾತ್ರ ಸೋನಂ ವಾಂಗ್ಚುಕ್ ಅವರ ಪ್ರೇರಣೆಯಿಂದ ಮೂಡಿಬಂದಿದ್ದು ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಮೀರ್, ವಿಡಿಯೋದಲ್ಲಿ ಓಮಿ ವೈದ್ಯ ಹೇಳಿರುವುದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದರು. ನಾವು ಯಾರನ್ನಾದರೂ ಗೌರವಿಸಲು ಅವರ ವ್ಯಕ್ತಿತ್ವವು ಕೇವಲ ಸಿನಿಮಾದ ಪಾತ್ರವೊಂದಕ್ಕೆ ಹೋಲಿಕೆಯಾಗಬೇಕಾಗಿಲ್ಲ; ಸೋನಂ ಮಾಡುತ್ತಿರುವ ಸಮಾಜಮುಖಿ ಕೆಲಸಗಳೇ ಅವರನ್ನು ಗೌರವಿಸಲು ಸಾಕು ಎಂದು ಆಮೀರ್ ಅಭಿಪ್ರಾಯಪಟ್ಟಿದ್ದಾರೆ.
Today at @BFI I asked Mr Amir Khan about @Wangchuk66 and his fast. Here is his response: @abhijeet_dipke @CJP_2029 @Cockroachisback @SauravDassss pic.twitter.com/jkeKFssrDX
— nabanita sircar (@sircarnabanita) July 16, 2026
ಕಳೆದ ಎರಡು ವಾರಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ 59 ವರ್ಷದ ಸೋನಂ ವಾಂಗ್ಚುಕ್ ಅವರ ದೇಹಸ್ಥಿತಿ ಗಂಭೀರವಾಗಿದ್ದು, ಈಗಾಗಲೇ 8 ರಿಂದ 9 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಅವರ ರಕ್ತದೊತ್ತಡ ಹಾಗೂ ಶುಗರ್ ಮಟ್ಟ ತೀವ್ರವಾಗಿ ಕುಸಿದಿದ್ದು, ವೈದ್ಯರು ಮತ್ತು ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ. ಸಿನಿಮಾದ ಕಥೆಯ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಆಮೀರ್ ಖಾನ್, ಸೋನಂ ಅವರು ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುತ್ತಿರುವ ಹೋರಾಟ ಅತ್ಯಂತ ಸರಿಯಾದದ್ದು, ಆದರೆ ಆರೋಗ್ಯ ತೀರ ಹದಗೆಡುತ್ತಿರುವುದರಿಂದ ಅವರು ದಯವಿಟ್ಟು ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು ತಮ್ಮ ಜೀವಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
