TOP NEWS

Ram Mandir: ರಾಮಮಂದಿರ ದೇಣಿಗೆ ದುರುಪಯೋಗ ಪ್ರಶ್ನಿಸಿದ್ದಕ್ಕೆ ಕೋಪ: ಕ್ಯಾಮೆರಾ ಮುಂದೆಯೇ ಚಪ್ಪಲಿ ಹಿಡಿದು ಮುಗಿಬಿದ್ದ ರಾಜಕಾರಣಿ!

Assault on Live TV BJP Leader Hits Hindu Priest with Sandal for Questioning Ram Mandir Donation Funds

ಹೈದರಾಬಾದ್‌: ಇಲ್ಲಿ ನಡೆದ ಲೈವ್ ಯೂಟ್ಯೂಬ್ ಚರ್ಚಾ ಕಾರ್ಯಕ್ರಮವೊಂದರಲ್ಲಿ ಹಿಂದೂ ಅರ್ಚಕ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ವಿ. ರಮಣ ಮೂರ್ತಿ ಅವರ ಮೇಲೆ ತೆಲಂಗಾಣದ ಬಿಜೆಪಿ (Ram Mandir) ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆ. ಅಯೋಧ್ಯಾ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಮತ್ತು ಹಿಂದೂ ಧರ್ಮಕ್ಕೆ ಧಕ್ಕೆ ತರುತ್ತಿರುವ ಇತರ ಕೆಲವು ವಿಷಯಗಳ ಬಗ್ಗೆ ರಮಣ ಮೂರ್ತಿ ಅವರು ಪ್ರಶ್ನೆ ಎತ್ತಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ‘ಹಿಂದೂಸ್ ಫಾರ್ ಪ್ಲೂರಲಿಟಿ ಅಂಡ್ ಈಕ್ವಾಲಿಟಿ’ (HPE) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜೈ ಭಾರತ್ ಪಬ್ಲಿಕೇಷನ್ಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ರಮಣ ಮೂರ್ತಿ ಅವರು, ಬಿಆರ್‌ಕೆ ನ್ಯೂಸ್ ಯೂಟ್ಯೂಬ್ ವಾಹಿನಿ ಹಮ್ಮಿಕೊಂಡಿದ್ದ ನೇರ ಪ್ರಸಾರದ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಈ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಮೂರು ಪ್ರಶ್ನೆ ಕೇಳಿದ್ದ ಹಿಂದೂ ಕಾರ್ಯಕರ್ತ

ಈ ಚರ್ಚೆಯ ಸಮಯದಲ್ಲಿ ರಮಣ ಮೂರ್ತಿ ಅವರು ಪ್ರಮುಖವಾಗಿ ಮೂರು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಮೊದಲನೆಯದಾಗಿ, ಇತ್ತೀಚಿನ ವಾರಗಳಲ್ಲಿ ರಾಜಕೀಯವಾಗಿ ಭಾರಿ ಸದ್ದು ಮಾಡುತ್ತಿರುವ ಅಯೋಧ್ಯಾ ರಾಮಮಂದಿರದ ದೇಣಿಗೆ ಹಣದ ದುರುಪಯೋಗದ ಬಗ್ಗೆ ಅವರು ಪ್ರಶ್ನಿಸಿದ್ದರು. ಎರಡನೆಯದಾಗಿ, ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಹನುಮಂತನ ವೇಷ ಧರಿಸಿದ್ದ ಕಲಾವಿದರೊಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಬೆಂಗಾವಲು ವಾಹನದ ಮುಂದೆ ನೃತ್ಯ ಮಾಡಿಸಿದ ವೀಡಿಯೊವನ್ನು ಉಲ್ಲೇಖಿಸಿ, ಇದು ದೇವರಿಗೆ ಮಾಡಿದ ಅವಮಾನ ಮತ್ತು ಹಿಂದೂ ಸಂಪ್ರದಾಯದ ಅಧಃಪತನ ಎಂದು ಟೀಕಿಸಿದ್ದರು. ಮೂರನೆಯದಾಗಿ, ದಶಾವತಾರದ ಪೋಸ್ಟರ್ ಒಂದರಲ್ಲಿ ಶ್ರೀಕೃಷ್ಣನ ಮುಖದ ಜಾಗಕ್ಕೆ ಪ್ರಧಾನಮಂತ್ರಿಯವರ ಮುಖವನ್ನು ಡಿಜಿಟಲ್ ಆಗಿ ಬದಲಾಯಿಸಿರುವ ಪತ್ರಿಕಾ ವರದಿಯನ್ನು ಪ್ರದರ್ಶಿಸಿ, ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ವಾದಿಸಿದ್ದರು.

ಚಪ್ಪಲಿಯಿಂದ ಹೊಡೆದ ಬಿಜೆಪಿ ಮುಖಂಡ

“ಶ್ರೀಕೃಷ್ಣನ ತಲೆಯನ್ನು ನೀವು ಹೇಗೆ ಬದಲಾಯಿಸಲು ಸಾಧ್ಯ?” ಎಂದು ಅರ್ಚಕರು ಪ್ರಶ್ನಿಸುತ್ತಿದ್ದಂತೆ ಕೆರಳಿದ ಬಿಜೆಪಿ ನಾಯಕ, ಇಂತಹ ವಿಷಯಗಳನ್ನು ಪ್ರಸ್ತಾಪಿಸದಂತೆ ಎಚ್ಚರಿಕೆ ನೀಡಿ ಅಲ್ಲೇ ಇಲಾಖೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ರಮಣ ಮೂರ್ತಿ ಅವರು ತಮ್ಮ ಮಾತನ್ನು ಪುನರಾವರ್ತಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಕ್ಯಾಮೆರಾದ ಮುಖೇನವೇ ಅವರ ಮೇಲೆ ಮುಗಿಬಿದ್ದು ತಮ್ಮ ಕಾಲಿನ ಚಪ್ಪಲಿಯಿಂದ ಅರ್ಚಕರಿಗೆ ಮನಬಂದಂತೆ ಹೊಡೆದಿದ್ದಾರೆ. ಈ ಘಟನೆಯು ಧಾರ್ಮಿಕ ಮತ್ತು ನಾಗರಿಕ ಸಮಾಜದ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬುಧವಾರ ಹೈದರಾಬಾದ್‌ನ ಬಶೀರ್‌ಬಾಗ್ ಪ್ರೆಸ್ ಕ್ಲಬ್‌ನಲ್ಲಿ ಜಮಾಯಿಸಿದ ಹಲವು ಅರ್ಚಕರು ಮತ್ತು ನಾಗರಿಕ ಸಂಘಟನೆಗಳ ಮುಖಂಡರು ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ರಮಣ ಮೂರ್ತಿ ಅವರಿಗೆ ಬೆಂಬಲ ಸೂಚಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಮಣ ಮೂರ್ತಿ, ತಾನು ಹಿಂದೂವಾಗಿ ಹುಟ್ಟಿದ್ದು, ಜೀವಿತಾವಧಿಯ ಕೊನೆಯವರೆಗೂ ಹಿಂದೂವಾಗಿಯೇ ಇರುತ್ತೇನೆ. ಧರ್ಮಕ್ಕೆ ಹಾನಿ ಮಾಡುವ ನಡವಳಿಕೆಗಳನ್ನು ಪ್ರಶ್ನಿಸಿದ್ದಕ್ಕೇ ನನ್ನನ್ನು ಗುರಿ ಮಾಡಲಾಗಿದೆ. ಆದರೆ ಇಂತಹ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಮತ್ತು ರಾಜಕೀಯವನ್ನು ಧರ್ಮದಿಂದ ದೂರವಿಡಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಿವೃತ್ತ ನ್ಯಾಯಮೂರ್ತಿ ಚಂದ್ರಕುಮಾರ್ ಅವರು, ರಮಣ ಮೂರ್ತಿ ಅವರು ಹಿಂದೂ ಮೌಲ್ಯಗಳ ಬಗ್ಗೆ ಸಾಕ್ಷ್ಯ ಸಮೇತ ವಾದಿಸುವ ವ್ಯಕ್ತಿಯಾಗಿದ್ದು, ಅವರ ಮೇಲಿನ ಹಲ್ಲೆ ಆತಂಕಕಾರಿಯಾಗಿದೆ ಎಂದು ಹೇಳಿ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅನ್ನಮಯ್ಯ ಕಲಾಕ್ಷೇತ್ರದ ಮುಖ್ಯಸ್ಥ ಶ್ರೀ ವಿಜಯಶಂಕರ್ ಸ್ವಾಮಿ ಮಾತನಾಡಿ, ಹಿಂದೂ ಧರ್ಮದಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ ಎಂದು ಹೇಳಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ದೈಹಿಕ ಕೃತ್ಯವಷ್ಟೇ ಮಾನದಂಡವಲ್ಲ; ಸಂತ್ರಸ್ತೆಯ ಘನತೆಗೂ ಆದ್ಯತೆ ನೀಡಿ: ರಾಷ್ಟ್ರೀಯ ಮಹಿಳಾ ಆಯೋಗ!

Leave a Reply

Your email address will not be published. Required fields are marked *