TOP NEWS

Pradeep Eshwar: ಪ್ರದೀಪ್ ಈಶ್ವರ್‌ಗೆ ಜೀವಬೆದರಿಕೆ ಹಾಕಿದ ಕೇಸ್: ಎಚ್‌ಡಿಕೆ ಬೆಂಬಲಿಗರಿಗೆ ಹೈಕೋರ್ಟ್‌ನಲ್ಲಿ ರಿಲೀಫ್, ತನಿಖೆಗೆ ಮಧ್ಯಂತರ ತಡೆ!

Death Threat to MLA Pradeep Eshwar Karnataka HC Pauses Probe Against HDK Fans Questions FIR

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (‌Pradeep Eshwar) ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳಿಗೆ ಹೈಕೋರ್ಟ್‌ನಲ್ಲಿ ದೊಡ್ಡ ಸಮಾಧಾನ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯ ಮುಂದಿನ ತನಿಖೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಪೊಲೀಸರಿಗೆ ನೋಟಿಸ್

ತಮ್ಮ ವಿರುದ್ಧ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ ಸ್ಥಳೀಯ ಪ್ರಧಾನ ಹಿರಿಯ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳನ್ನು ವಜಾಗೊಳಿಸಬೇಕು ಎಂದು ಕೋರಿ ಆರೋಪಿಗಳಾದ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಮಹೇಂದ್ರ ಟಿ.ಎಸ್. ಹಾಗೂ ಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಅರ್ಜಿದಾರರ ವಿರುದ್ಧದ ಎಲ್ಲಾ ತನಿಖಾ ನಡಾವಳಿಗಳಿಗೆ ಬ್ರೇಕ್ ಹಾಕಿದೆ.

ವಿಚಾರಣೆಯ ವೇಳೆ ಪೊಲೀಸರ ಕ್ರಮಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಾಲಯವು ಸರ್ಕಾರಿ ವಕೀಲರನ್ನು ತೀವ್ರವಾಗಿ ಪ್ರಶ್ನಿಸಿತು. ಗಲಾಟೆ ನಡೆದ ದಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸುಮಾರು 800ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎನ್ನಲಾಗಿದೆ. ಅಷ್ಟು ದೊಡ್ಡ ಜನಸಂದಣಿಯ ನಡುವೆ ಕೇವಲ ಈ ನಾಲ್ಕು ಜನರನ್ನು ಮಾತ್ರವೇ ಆಯ್ದು ಎಫ್‌ಐಆರ್ ದಾಖಲಿಸಿದ್ದು ಏಕೆ ಎಂದು ಹೈಕೋರ್ಟ್ ಕೇಳಿದೆ. ಸದ್ಯ ತನಿಖೆಗೆ ಸ್ಟೇ ನೀಡಿರುವ ಕೋರ್ಟ್, ಪ್ರಕರಣದ ಪ್ರತಿವಾದಿಗಳಾದ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣಾಧಿಕಾರಿ ಹಾಗೂ ಸ್ವಯಂಪ್ರೇರಿತ ದೂರು ದಾಖಲಿಸಿದ್ದ ಪಿಎಸ್‌ಐ ಎಸ್.ಎಂ. ಅಮರ್ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಕೆಂಪೇಗೌಡ ಜಯಂತಿಯಲ್ಲಿ ನಡೆದಿದ್ದೇನು?

ಕಳೆದ ಜೂನ್ 27 ರಂದು ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಶಾಸಕರು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಯೊಂದನ್ನು ಮುಂದಿಟ್ಟುಕೊಂಡು ಎಚ್‌ಡಿಕೆ ಅಭಿಮಾನಿಗಳ ಗುಂಪೊಂದು ಶಾಸಕರನ್ನು ಮುತ್ತಿಗೆ ಹಾಕಿತ್ತು.

ಬೆಳಗ್ಗೆ 11:30ರ ಸುಮಾರಿಗೆ ಉಭಯ ಬಣಗಳ ನಡುವೆ ಭಾರಿ ಹೈಡ್ರಾಮಾ ನಡೆದಿದ್ದು, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ, ನಿಂದಿಸಿ, ಪ್ರಾಣ ಬೆದರಿಕೆ ಹಾಕಲಾಗಿತ್ತು ಮತ್ತು ಅವರ ಮೇಲೆ ಶೂ ಎಸೆಯಲಾಗಿತ್ತು ಎಂದು ಆರೋಪಿಸಲಾಗಿತ್ತು. ಸ್ಥಳದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪಿಎಸ್‌ಐ ಎಸ್.ಎಂ. ಅಮರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಜೀವ ಬೆದರಿಕೆ ಒಡ್ಡಿದ ಕಾಯ್ದೆಗಳಡಿ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಪೊಲೀಸರ ಈ ಕ್ರಮಕ್ಕೆ ಈಗ ಹೈಕೋರ್ಟ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.

ಇದನ್ನೂ ಓದಿ: ಎಸ್‌ಐಆರ್‌ನಲ್ಲಿ ಸರ್ಕಾರದ ಕೈವಾಡವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ!

Leave a Reply

Your email address will not be published. Required fields are marked *