ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ಮೆಟ್ಟಿಲೇರಲು ಸಜ್ಜಾಗಿರುವ ವಿರೋಧ ಪಕ್ಷಗಳ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, (BK Hariprasad) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆಗೂಡಿ ದೂರು ನೀಡಲು ಮುಂದಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಈ ಹಿಂದೆ ಪ್ರಹ್ಲಾದ್ ಜೋಶಿಯವರು ಕುಮಾರಸ್ವಾಮಿ ಅವರ ವಿರುದ್ಧ ಬಳಸಿದ್ದ ಕೀಳು ಮಟ್ಟದ ಪದಗಳ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಆದರೆ, ಇಂದು ಅದೇ ಜೋಶಿಯವರು ಹೆಚ್ಡಿಕೆ ಅವರನ್ನು ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದ್ದು, ಎಸ್ಐಆರ್ ವಿವಾದದ ಹೆಸರಿನಲ್ಲಿ ಅವರನ್ನು ಹರಕೆಯ ಕುರಿ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಲೇವಡಿ ಮಾಡಿದರು. ಎರಡು ಬಾರಿ ರಾಜ್ಯದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರಿಗೆ ಈ ಹೊತ್ತಿನಲ್ಲಿ ಇಂತಹ ಬುದ್ಧಿ ಏಕೆ ಬಂತೋ ತಿಳಿಯುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷವನ್ನೇ ಮುಗಿಸಲು ಬಿಜೆಪಿ ಯತ್ನ ಬಿಜೆಪಿಯ ಒಳಗುದ್ದಿನ ರಾಜಕೀಯ ತಂತ್ರಗಳ ಬಗ್ಗೆ ಎಚ್ಚರಿಕೆ ನೀಡಿದ ಹರಿಪ್ರಸಾದ್, ಬಿಜೆಪಿಯವರು ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಬಳಸಿಕೊಂಡು ಕಸದಂತೆ ಬಿಸಾಡಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವವನ್ನೇ ಅವರು ಇಲ್ಲದಂತೆ ಮಾಡಲಿದ್ದಾರೆ. ಅಂತಹ ದುಸ್ಥಿತಿ ಬಂದಾಗ ಜೆಡಿಎಸ್ನವರ ರಕ್ಷಣೆಗೆ ಕೊನೆಗೆ ಕಾಂಗ್ರೆಸ್ ಪಕ್ಷವೇ ಮುಂದೆ ಬರಬೇಕಾಗುತ್ತದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೋನಿಯಾ ಗಾಂಧಿಯವರು ಹೇಗೆ ರಕ್ಷಣೆ ನೀಡಿದ್ದಾರೋ, ಅದೇ ಮಾದರಿಯಲ್ಲಿ ಭವಿಷ್ಯದಲ್ಲಿ ಜೆಡಿಎಸ್ ಉಳಿವಿಗೂ ನಾವೇ ಆಸರೆಯಾಗಬೇಕಾಗುತ್ತದೆ ಎಂದರು.
ಇದೇ ವೇಳೆ, ರಾಜ್ಯದಲ್ಲಿ 20 ಲಕ್ಷ ಬಾಂಗ್ಲಾ ವಲಸಿಗರಿದ್ದಾರೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಇತ್ತೀಚಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಭಾರಿ ಮತಗಳ ಅಂತರದಿಂದ ಗೆದ್ದಾಗ ಈ ಬಾಂಗ್ಲಾ ವಲಸಿಗರು ಎಲ್ಲಿ ಹೋಗಿದ್ದರು? ನಿಮ್ಮ ಅನುಕೂಲಕ್ಕೆ ತಕ್ಕಂತೆ ಸುಳ್ಳುಗಳನ್ನು ಸೃಷ್ಟಿಸುವುದು ಸರಿಯಲ್ಲ. ಒಂದು ವೇಳೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸಲು ಸ್ವತಂತ್ರ ಚುನಾವಣಾ ಆಯೋಗವಿದೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ಬದಲಿಸುವ ಬಿಜೆಪಿಯ ಕುತಂತ್ರಕ್ಕೆ ಆಸ್ಪದ ನೀಡುವುದಿಲ್ಲ ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ದೇಶದ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿಲ್ಲ. ಅದಕ್ಕಾಗಿಯೇ ಅವರು ಈಗ ಈ ಎಸ್ಐಆರ್ ಪ್ರಕ್ರಿಯೆಯ ಮೂಲಕ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಇದೇ ಎಸ್ಐಆರ್ ನೆಪದಲ್ಲಿ ಸುಮಾರು 27 ಲಕ್ಷ ಬಡ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಈಗ ಇಡೀ ದೇಶಾದ್ಯಂತ ಇದೇ ತಂತ್ರ ಬಳಸಿ 2/3ರಷ್ಟು ಬಹುಮತ ಪಡೆದು ಸಂವಿಧಾನವನ್ನು ಬದಲಾಯಿಸುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯೋಗದ ಮಾರ್ಗಸೂಚಿಗಳ ಪ್ರಕಾರ ಶಾದಿ ಮಹಲ್, ಮಸೀದಿ ಅಥವಾ ಮಾರುಕಟ್ಟೆ ಸೇರಿದಂತೆ ಸಾರ್ವಜನಿಕರು ಇರುವ ಯಾವುದೇ ಸ್ಥಳದಲ್ಲಾದರೂ ಎಸ್ಐಆರ್ ಅರ್ಜಿಗಳನ್ನು ಭರ್ತಿ ಮಾಡಬಹುದು. ಇದು ಯಾವುದೇ ನಿಯಮಗಳ ಉಲ್ಲಂಘನೆಯಲ್ಲ. ಕರ್ನಾಟಕವನ್ನು ಉತ್ತರ ಪ್ರದೇಶ, ಬಿಹಾರದಂತೆ ಮಾಡಲು ಹೊರಟಿರುವ ಬಿಜೆಪಿಯ ಈ ಹುನ್ನಾರಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಬಿಜೆಪಿಯ ಈ ಷಡ್ಯಂತ್ರದ ವಿರುದ್ಧ ಕಾಂಗ್ರೆಸ್ ವತಿಯಿಂದಲೂ ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಇ-ಬಸ್ ಸರಣಿ ಅಪಘಾತ: ಹೈಟೆಕ್ ವಾಹನಗಳಿಗೆ ಬೇಕಿಲ್ಲವೇ ದಕ್ಷ ಚಾಲಕರು? ಬಯಲಾಯ್ತು ಅಸಲಿ ರಹಸ್ಯ!
