TOP NEWS

Corruption: 20 ಸಾವಿರ ಕಿಕ್‌ಬ್ಯಾಕ್ ಪಡೆದು ಸಿಕ್ಕಿಬಿದ್ದಿದ್ದ ಯಡ್ರಾಮಿ ಪೊಲೀಸರಿಗೆ ಇಲ್ಲ ಬಿಡುಗಡೆ; ಜಾಮೀನು ತಳ್ಳಿಹಾಕಿದ ನ್ಯಾಯಾಲಯ

Kalburgi court denied bail to PSI and his co workers Corruption

ಕಲಬುರಗಿ:ಯಡ್ರಾಮಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ವಿಶ್ವನಾಥ ಮುದರೆಡ್ಡಿ ಹಾಗೂ ಅವರ ಇಲಾಖೆಯ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಅವರ (Corruption) ಜೈಲು ಮುಕ್ತಿ ಸದ್ಯಕ್ಕಿಲ್ಲ. ಲಂಚದ ಹಣದೊಂದಿಗೆ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದ ಈ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ವಜಾಗೊಳಿಸಿದೆ. ಇದರಿಂದಾಗಿ ಇಬ್ಬರೂ ಭ್ರಷ್ಟ ಸಿಬ್ಬಂದಿ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಸಿಬ್ಬಂದಿ ಕಳೆದ ಗುರುವಾರ ದೂರುದಾರರೊಬ್ಬರಿಂದ ಇಪ್ಪತ್ತು ಸಾವಿರ ರೂಪಾಯಿ ಲಂಚದ ಹಣವನ್ನು ವಸೂಲಿ ಮಾಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಯಡ್ರಾಮಿ ಠಾಣೆಯ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಹಣದ ಸಮೇತ ಸಿಕ್ಕಿಬಿದ್ದಿದ್ದ ಪಿಎಸ್‌ಐ ವಿಶ್ವನಾಥ ಹಾಗೂ ಪೇದೆ ಸಿದ್ದಣ್ಣ ಅವರನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು. ಬಳಿಕ ಇಬ್ಬರನ್ನೂ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಲೋಕಾಯುಕ್ತ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗಟ್ಟಿದ್ದರು.

ಸಾಕ್ಷ್ಯ ನಾಶದ ಆತಂಕ; ಲೋಕಾಯುಕ್ತ ವಕೀಲರ ಪ್ರಬಲ ವಾದ ಕಂಬಿ ಎಣಿಸುತ್ತಿರುವ ಆರೋಪಿಗಳ ಬಿಡುಗಡೆಗಾಗಿ ಶುಕ್ರವಾರದಂದೇ ಅವರ ಪರ ವಕೀಲರು ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಶನಿವಾರ ಈ ಅರ್ಜಿಗೆ ಕೌಂಟರ್ ಕೊಟ್ಟಿದ್ದ ಲೋಕಾಯುಕ್ತ ಇಲಾಖೆಯ ವಕೀಲರು, ಭ್ರಷ್ಟಾಚಾರದ ಈ ಪ್ರಕರಣದ ತನಿಖೆ ಇನ್ನೂ ಚುರುಕಾಗಿ ನಡೆಯುತ್ತಿದೆ. ಪ್ರಭಾವಿ ಸ್ಥಾನದಲ್ಲಿರುವ ಈ ಅಧಿಕಾರಿಗಳು ಹೊರಬಂದರೆ ಸಾಕ್ಷಿಗಳನ್ನು ಬೆದರಿಸುವ ಅಥವಾ ನಾಶಪಡಿಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಸೋಮವಾರ ಈ ಅರ್ಜಿಯ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಎಲ್. ಲಕ್ಷ್ಮಿನಾರಾಯಣ ಅವರು ಉಭಯ ಪಕ್ಷಗಳ ವಾದವನ್ನು ಆಲಿಸಿದರು. ಲೋಕಾಯುಕ್ತ ಪೊಲೀಸರ ಆಕ್ಷೇಪಣೆಯಲ್ಲಿ ಕಾನೂನಾತ್ಮಕ ಸತ್ಯ ಇರುವುದನ್ನು ಒಪ್ಪಿದ ನ್ಯಾಯಾಧೀಶರು, ಇಬ್ಬರೂ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿ ಆದೇಶ ನೀಡಿದರು. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಲೋಕಾಯುಕ್ತ ಎಪಿಪಿ ಎಸ್.ಎಸ್. ಚಾಂದ್ ಕೌಟೆ ನಿಂತರೆ, ಆರೋಪಿಗಳ ಪರವಾಗಿ ವಕೀಲ ಬಾಬುರಾವ್ ವಾದ ಮಂಡಿಸಿದ್ದರು. ಸದ್ಯಕ್ಕೆ ಕೋರ್ಟ್‌ನಿಂದ ಯಾವುದೇ ರಿಲೀಫ್ ಸಿಗದ ಕಾರಣ ಪಿಎಸ್‌ಐ ವಿಶ್ವನಾಥ ಮತ್ತು ಸಿದ್ದಣ್ಣ ಜೈಲಿನಲ್ಲೇ ಉಳಿಯುವಂತಾಗಿದೆ.

ಇದನ್ನೂ ಓದಿ: ಸರ್ಕಾರಿ ಆದೇಶದ ಪ್ರತಿ ಹರಿದು ಎಂಇಎಸ್ ಪುಂಡಾಟ; ಕರವೇ ಆಕ್ರೋಶ, ಸಂಘಟನೆ ನಿಷೇಧಕ್ಕೆ ಆಗ್ರಹ

Leave a Reply

Your email address will not be published. Required fields are marked *