TOP NEWS

R Ashok: ಸಮಾವೇಶದ ಟ್ರಾಫಿಕ್ ಕಿರಿಕಿರಿಗೆ ನೀಟ್ ಅಭ್ಯರ್ಥಿಗಳು ಕಣ್ಣೀರು; ಸರ್ಕಾರದ ವಿರುದ್ಧ ಆರ್. ಅಶೋಕ್ ತೀವ್ರ ಆಕ್ರೋಶ

R ashok slams government for created problem for nEET students

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ನಡೆದ ನೀಟ್ (NEET) ಮರುಪರೀಕ್ಷೆಯ ವೇಳೆ ಸೃಷ್ಟಿಯಾದ ಭಾರಿ ಸಂಚಾರ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ವಂಚಿತರಾದ ಘಟನೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅತ್ಯಂತ ಪ್ರಮುಖವಾದ ಪರೀಕ್ಷೆ ಇರುವ ದಿನವೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದರಿಂದಲೇ ಇಡೀ ನಗರದ ರಸ್ತೆಗಳು ಬ್ಲಾಕ್ ಆಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗಿದೆ ಎಂದು ಅವರು ದೂರಿದ್ದಾರೆ.

ನಗರದ ಆರ್.ಸಿ. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಬೇಸರದ ಸಂಗತಿ ನಡೆದಿದ್ದು, ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಮೂವರು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಕೇಂದ್ರ ತಲುಪಲಾಗದೆ ಪರೀಕ್ಷೆಯಿಂದ ಹೊರಗುಳಿಯಬೇಕಾಯಿತು. ವರ್ಷವಿಡೀ ಕಷ್ಟಪಟ್ಟು ಓದಿದ್ದ ಮಕ್ಕಳು ಪರೀಕ್ಷೆ ಬರೆಯಲು ಅವಕಾಶ ಸಿಗದೆ ಪರೀಕ್ಷಾ ಕೇಂದ್ರದ ಗೇಟ್ ಬಳಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂದಿತು. ಈ ದುಸ್ಥಿತಿಗೆ ಸರ್ಕಾರದ ಬೇಜವಾಬ್ದಾರಿತನ ಹಾಗೂ ಕೆಟ್ಟ ಸಂಚಾರ ನಿರ್ವಹಣೆಯೇ ಕಾರಣ ಎಂದು ಪೋಷಕರು ಮತ್ತು ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಪದಗ್ರಹಣ ಮುಂದೂಡಿದ್ದರೆ ಆಗುತ್ತಿರಲಿಲ್ಲವಾ?

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ನಾಯಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಭಾನುವಾರ ನೀಟ್ ಮರುಪರೀಕ್ಷೆ ನಡೆಯುವುದು ಮೊದಲೇ ನಿಗದಿಯಾಗಿದ್ದರೂ ಕಾಂಗ್ರೆಸ್ ನಾಯಕರು ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಸಭೆ ನಡೆಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಇವರ ಕಾರ್ಯಕರ್ತರ ವಾಹನಗಳಿಂದಾಗಿ ಇಡೀ ರಸ್ತೆಗಳು ಬಂದ್ ಆಗಿದ್ದವು. ಈ ಕಾರ್ಯಕ್ರಮವನ್ನು ಕೇವಲ ಎರಡು ಗಂಟೆ ತಡವಾಗಿ ಆರಂಭಿಸಿದ್ದರೆ ಏನಾಗುತ್ತಿತ್ತು? ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮವನ್ನು ಸ್ವಲ್ಪ ಮುಂದೂಡಿದ್ದರೆ ಅವರ ಅಧ್ಯಕ್ಷ ಸ್ಥಾನವೇನು ಹೋಗುತ್ತಿರಲಿಲ್ಲ. ಈ ಕನಿಷ್ಠ ಜ್ಞಾನ ಮತ್ತು ಸೌಜನ್ಯವೂ ಆಡಳಿತ ಪಕ್ಷಕ್ಕೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಪ್ರಧಾನಮಂತ್ರಿಯವರ ಉದಾಹರಣೆ ನೀಡಿದ ಅಶೋಕ್, ಸಾರ್ವಜನಿಕರಿಗೆ ಹಾಗೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟ್ರಾಫಿಕ್‌ನಿಂದ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪ್ರಧಾನಿಯವರೇ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ಕಾಯ್ದು ಕುಳಿತ ಇತಿಹಾಸವಿದೆ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕಾಂಗ್ರೆಸ್ ನಾಯಕರು, ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ತಮ್ಮ ತಪ್ಪುಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಇದೇ ವೇಳೆ ಕಾಂಗ್ರೆಸ್ ಸಭೆಯ ಗೊಂದಲಗಳ ಬಗ್ಗೆ ಲೇವಡಿ ಮಾಡಿದ ಅವರು, ಭಾನುವಾರದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೇ ಸ್ವಪಕ್ಷದ ಕಾರ್ಯಕರ್ತರು ಗೌರವ ಕೊಡಲಿಲ್ಲ. ಅವರು ಮಾತನಾಡಲು ನಿಂತಾಗ ಕೆಳಗಿದ್ದವರು ನಿರಂತರವಾಗಿ ‘ಡಿಕೆ ಡಿಕೆ’ ಎಂದು ಘೋಷಣೆ ಕೂಗುತ್ತಾ ಗದ್ದಲ ಸೃಷ್ಟಿಸಿದರು. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರಿಗೇ ವೇದಿಕೆಯ ಮೇಲೆ ಅಪಮಾನ ಮಾಡಲಾಯಿತು ಎಂದು ಅಶೋಕ್ ಟೀಕಿಸಿದರು.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಸ್ಫೋಟ; ಹೈಕಮಾಂಡ್ ಕೋಪಕ್ಕೆ ಗುರಿಯಾದರೇ ವಿಜಯೇಂದ್ರ?

Leave a Reply

Your email address will not be published. Required fields are marked *