ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಸ್ಥಾಪನೆಗೂ ಮುನ್ನವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೆರಳಿನಂತೆ ನಿಂತಿದ್ದ ಹಿರಿಯ ನಾಯಕ ಜ್ಯೋತಿಪ್ರಿಯ ಮಲ್ಲಿಕ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮಗೆ ತೀವ್ರವಾಗಿ ಸಕ್ಕರೆ ಕಾಯಿಲೆ (ಶುಗರ್) ಹೆಚ್ಚಾಗಿರುವ ಕಾರಣ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ಬರೆದಿರುವ ಕೈಬರಹದ ಬಂಗಾಳಿ ಪತ್ರದಲ್ಲಿ ಮಲ್ಲಿಕ್ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ಭರ್ಜರಿ ಜಯಗಳಿಸಿ ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಡಳಿತಕ್ಕೆ ತೆರೆ ಎಳೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಮತಾ ಒಡನಾಡಿಯಾಗಿದ್ದ ಮಲ್ಲಿಕ್
ಪಕ್ಷದೊಳಗೆ “ಬಾಲು” ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಜ್ಯೋತಿಪ್ರಿಯ ಮಲ್ಲಿಕ್, ಕೋಲ್ಕತ್ತಾ ಪಕ್ಕದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಭಾರಿ ರಾಜಕೀಯ ಪ್ರಭಾವ ಹೊಂದಿದ್ದರು. 1980ರ ದಶಕದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಲ್ಲಿದ್ದ ಇವರು, ಆಗ ಉದಯೋನ್ಮುಖ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ಅವರ ಹೋರಾಟದ ಹಾದಿಯಿಂದ ಪ್ರಭಾವಿತರಾಗಿದ್ದರು. 1984ರ ಲೋಕಸಭಾ ಚುನಾವಣೆಯಲ್ಲಿ ಜಾದವ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಪರವಾಗಿ ಮಲ್ಲಿಕ್ ತೀವ್ರ ಪ್ರಚಾರ ನಡೆಸಿದ್ದರು. ಅಂದಿನಿಂದ ಮಮತಾ ಅವರ ಅತ್ಯಂತ ನಂಬಿಕಸ್ಥ ಒಡನಾಡಿಯಾಗಿ ಬೆಳೆದ ಇವರನ್ನು, 1998ರಲ್ಲಿ ಟಿಎಂಸಿ ಪಕ್ಷ ಸ್ಥಾಪನೆಯಾದ ತಕ್ಷಣ ಮಮತಾ ಬ್ಯಾನರ್ಜಿ ಅವರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ ಗೌರವಿಸಿದ್ದರು.
ಉತ್ತರ 24 ಪರಗಣ ಜಿಲ್ಲೆಯ ಪಕ್ಷದ ಜವಾಬ್ದಾರಿಯನ್ನು ಹೊತ್ತಿದ್ದ ಇವರ ಸಾರಥ್ಯದಲ್ಲೇ, 2016ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಜಿಲ್ಲೆಯ 33 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆದ್ದು ಬೀಗಿತ್ತು. ಸ್ವತಃ ಗಾಯಘಾಟಾ ಮತ್ತು ಹಬ್ರಾ ಕ್ಷೇತ್ರಗಳಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಿದ್ದ ಮಲ್ಲಿಕ್, ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಮೂರು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ಹಬ್ರಾ ಕ್ಷೇತ್ರದಿಂದ ಗೆದ್ದ ನಂತರ ಇವರಿಗೆ ಸತತ 10 ವರ್ಷಗಳ ಕಾಲ ಆಹಾರ ಇಲಾಖೆಯ ಉಸ್ತುವಾರಿ ನೀಡಲಾಗಿತ್ತು. ಆದರೆ, ಇದೇ ಇಲಾಖೆಯಲ್ಲಿ ನಡೆದ ರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇವರನ್ನು ಬಂಧಿಸಿದಾಗ ಇವರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಯಿತು.
2021ರ ಚುನಾವಣೆಯ ನಂತರ ಇವರಿಗೆ ಆಹಾರ ಇಲಾಖೆಯ ಬದಲು ಅರಣ್ಯ ಇಲಾಖೆಯ ಜವಾಬ್ದಾರಿ ನೀಡಲಾಗಿತ್ತು. ಅರಣ್ಯ ಸಚಿವರಾಗಿದ್ದ ಅವಧಿಯಲ್ಲೇ ಇವರು ಕೇಂದ್ರ ತನಿಖಾ ಸಂಸ್ಥೆಯಿಂದ ಬಂಧನಕ್ಕೊಳಗಾಗಿದ್ದರು. ಸುಮಾರು 15 ತಿಂಗಳುಗಳ ಕಾಲ ಜೈಲಿನಲ್ಲಿದ್ದ ಇವರು ಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದ ನಂತರ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಇತ್ತೀಚೆಗೆ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಇವರಿಗೆ ಮತ್ತೆ ಹಬ್ರಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಚುನಾವಣಾ ಪ್ರಚಾರದ ವೇಳೆ ಸ್ವತಃ ಮಮತಾ ಬ್ಯಾನರ್ಜಿ ಅವರೇ ಮಲ್ಲಿಕ್ ಪರವಾಗಿ ಬ್ಯಾಟ್ ಬೀಸಿ, ಇವರು ರಾಜ್ಯದ ಅತ್ಯುತ್ತಮ ಸಚಿವರಲ್ಲೊಬ್ಬರು ಹಾಗೂ ಭಾಜಪದ ರಾಜಕೀಯ ದ್ವೇಷಕ್ಕೆ ಬಲಿಯಾಗಿ ಕೇಂದ್ರ ಸಂಸ್ಥೆಗಳಿಂದ ಬಂಧನಕ್ಕೊಳಗಾಗಿದ್ದಾರೆ ಎಂದು ಪ್ರಮಾಣೀಕರಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಮಲ್ಲಿಕ್ ಸೋಲು ಅನುಭವಿಸಿದರು. ಈಗ ಅನಾರೋಗ್ಯದ ಕಾರಣ ನೀಡಿ ಅವರು ಟಿಎಂಸಿ ಪಕ್ಷಕ್ಕೆ ಗುಡ್ ಬೈ ಹೇಳಿರುವುದು ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
