ನವದೆಹಲಿ: ನೀಟ್ ಪರೀಕ್ಷೆಯ ಮರುಪರೀಕ್ಷೆ ಹಂಚಿಕೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾಡಿರುವ ಎಡವಟ್ಟು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಹಾರಾಷ್ಟ್ರದ ನಾಗ್ಪುರದ ನೀಟ್ ಅಭ್ಯರ್ಥಿಯೊಬ್ಬನಿಗೆ ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಗೆ ಯುಎಇಯ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಈ ಗಂಭೀರ ಲೋಪವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, (Rahul Gandhi) ದೇಶದ ಮಕ್ಕಳ ಭವಿಷ್ಯದ ಜೊತೆ ಜೂಜಾಡುವುದನ್ನು ಕೇಂದ್ರ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳವಳ ವ್ಯಕ್ತಪಡಿಸಿದ ರಾಹುಲ್
ಕಳೆದ ಒಂದು ತಿಂಗಳಿನಿಂದ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ನಾಗ್ಪುರದ ವಿದ್ಯಾರ್ಥಿ, ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಾಗ ಈ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಳವಳ ಹಂಚಿಕೊಂಡಿರುವ ರಾಹುಲ್ ಗಾಂಧಿ, ಆ ವಿದ್ಯಾರ್ಥಿ ಹತ್ತಿರ ಪಾಸ್‌ಪೋರ್ಟ್ ಕೂಡ ಇಲ್ಲ, ಅಷ್ಟು ದೂರ ಕಳುಹಿಸಲು ಆತನ ಕುಟುಂಬದ ಬಳಿ ಹಣವೂ ಇಲ್ಲ ಮತ್ತು ಈಗ ಹೋಗಲು ಸಮಯವೂ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಕಂಗಾಲಾದ ವಿದ್ಯಾರ್ಥಿ ಇಡೀ ರಾತ್ರಿ ಅತ್ತು, ಈಗ ಪರೀಕ್ಷೆ ಬರೆಯುವುದನ್ನೇ ನಿಲ್ಲಿಸಿದ್ದಾನೆ. ಆ ಮಗು ಮತ್ತು ಆತನ ಕುಟುಂಬ ಅನುಭವಿಸುತ್ತಿರುವ ಮಾನಸಿಕ ಒತ್ತಡವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.
नागपुर का एक बच्चा एक महीने से NEET re-exam की तैयारी कर रहा था।
— Rahul Gandhi (@RahulGandhi) June 20, 2026
कल परीक्षा से ठीक एक दिन पहले उसने admit card डाउनलोड किया। उसका सेंटर निकला – अबू धाबी।
न पासपोर्ट, न परिवार के पास विदेश भेजने के पैसे, न अब कोई वक़्त बचा है। वो रातभर रोता रहा, और परीक्षा देने से ही मना कर रहा… https://t.co/TJOHUBnFDB
ಸ್ವಂತ ಊರಿನಲ್ಲೇ ಪರೀಕ್ಷಾ ಕೇಂದ್ರ ನೀಡಲಾಗದ ಇಂತಹ ವ್ಯವಸ್ಥೆಗೆ ದೇಶದಲ್ಲಿ ಪರೀಕ್ಷೆ ನಡೆಸುವ ಯಾವುದೇ ಹಕ್ಕಿಲ್ಲ ಎಂದು ಕಿಡಿಕಾರಿರುವ ಅವರು, ಎನ್‌ಟಿಎ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಪೋಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ದೂರಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ಪ್ರಸ್ತುತ ಭಾರತದಲ್ಲಿರುವುದು ಶಿಕ್ಷಣ ವ್ಯವಸ್ಥೆಯಲ್ಲ, ಬದಲಿಗೆ ಇಡೀ ಯುವ ಪೀಳಿಗೆಯ ಹಣ, ಸಮಯ ಮತ್ತು ನೆಮ್ಮದಿಯನ್ನು ಲೂಟಿ ಮಾಡುವ ಶೋಷಣಾ ವ್ಯವಸ್ಥೆಯಾಗಿದೆ ಎಂದು ಟೀಕಿಸಿದ್ದಾರೆ. ಭಾರತದ ಇಂದಿನ ಶಿಕ್ಷಣ ಕ್ಷೇತ್ರವು ಅರ್ಹರನ್ನು ಆಯ್ಕೆ ಮಾಡುವ ಬದಲು, ಮಕ್ಕಳನ್ನು ಹೊರದೂಡುವ ತಾರತಮ್ಯದ ವ್ಯವಸ್ಥೆಯಾಗಿ ಬದಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಈ ನಡುವೆ, ಇಲಾಖೆಯ ಈ ಎಡವಟ್ಟು ದೊಡ್ಡ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದೆ. ಮುಂದಿನ ಕೆಲವೇ ಗಂಟೆಗಳಲ್ಲಿ ಸದರಿ ವಿದ್ಯಾರ್ಥಿಗೆ ನಾಗ್ಪುರದಲ್ಲೇ ಹೊಸ ಪರೀಕ್ಷಾ ಕೇಂದ್ರವನ್ನು ಮರುಹಂಚಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೇಪರ್ ಲೀಕ್ ಹಗರಣ ಹಾಗೂ ದುಬಾರಿ ಶಿಕ್ಷಣ ಶುಲ್ಕದ ವಿರುದ್ಧ ಇತ್ತೀಚೆಗಷ್ಟೇ ದೇಶದಾದ್ಯಂತ ಸಹಿ ಸಂಗ್ರಹ ಚಳವಳಿ ಆರಂಭಿಸಿರುವ ರಾಹುಲ್ ಗಾಂಧಿ, ನಮ್ಮ ದೇಶದ ಮಕ್ಕಳಿಗೆ ಜವಾಬ್ದಾರಿಯುತ ಮತ್ತು ಪಾರದರ್ಶಕವಾದ ಪರೀಕ್ಷಾ ವ್ಯವಸ್ಥೆ ಸಿಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
